Saturday, May 4, 2024
Homeರಾಷ್ಟ್ರೀಯಮೋದಿ ವಿರುದ್ಧ ನಾಲಿಗೆ ಹರಿಬಿಟ್ಟು ಪೊಲೀಸರ ಅತಿಥಿಯಾದ ವ್ಯಕ್ತಿ

ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟು ಪೊಲೀಸರ ಅತಿಥಿಯಾದ ವ್ಯಕ್ತಿ

ಬಿಲಾಸ್‍ಪುರ,ಏ.15- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಛತ್ತೀಸ್‍ಗಢದ ಬಿಲಾಸ್‍ಪುರ ಜಿಲ್ಲೆಯಲ್ಲಿ 26 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರವಿಂದ್ ಕುಮಾರ್ ಸೋನಿ ಅವರನ್ನು ಮಸ್ತೂರಿ ಪಟ್ಟಣದಿಂದ ಬಂಧಿಸಲಾಗಿದೆ ಎಂದು ಬಿಲಾಸ್‍ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅರ್ಚನಾ ಝಾ ತಿಳಿಸಿದ್ದಾರೆ.

ಭಡೋರಾ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯ ನಂತರ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಸೋನಿ ಅವರು ಪ್ರಧಾನಿ ಮೋದಿಯವರ ಮೇಲೆ ಟೀಕಾಪ್ರಹಾರ ಮಾಡಿದ್ದರು ಎಂದು ಝಾ ತಿಳಿಸಿದ್ದಾರೆ.

ಕನ್ಹಯ್ಯಾ ಕುಮಾರ್ ತಮ್ಮ ಪಕ್ಷದ ಅಭ್ಯರ್ಥಿ ದೇವೇಂದ್ರ ಸಿಂಗ್ ಯಾದವ್ ಪರ ಪ್ರಚಾರ ಮಾಡಲು ಬಿಲಾಸ್‍ಪುರ ಜಿಲ್ಲೆಯಲ್ಲಿದ್ದರು. ಭಾರತೀಯ ದಂಡ ಸಂಹಿತೆಯಡಿಯಲ್ಲಿ ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಅಶ್ಲೀಲ ಪದಗಳನ್ನು ಮತ್ತು ಉದ್ದೇಶಪೂರ್ವಕ ಅವಮಾನಕ್ಕಾಗಿ ಸೋನಿ ವಿರುದ್ಧ ಬಿಜೆಪಿ ನಾಯಕ ಬಿಪಿ ಸಿಂಗ್ ಅವರು ಸಲ್ಲಿಸಿದ ದೂರಿನ ಮೇರೆಗೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‍ಪಿಸಿ) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಛತ್ತೀಸ್‍ಗಢದ 11 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ಮತ್ತು ಮೇ 7 ರ ನಡುವೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಭಿಲಾಯ್‍ನ ಹಾಲಿ ಕಾಂಗ್ರೆಸ್ ಶಾಸಕ ದೇವೇಂದ್ರ ಸಿಂಗ್ ಯಾದವ್ ಅವರು ಬಿಲಾಸ್‍ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ತೋಖಾನ್ ಸಾಹು ವಿರುದ್ಧ ಸ್ಪರ್ಧಿಸಿದ್ದು, ಮೇ 7 ರಂದು ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

RELATED ARTICLES

Latest News