ಕಲಬುರಗಿ, ಸೆ.7– ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತಯಂತ್ರಗಳ ಬದಲಾಗಿ ಮತಪತ್ರಗಳನ್ನು ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮತಯಂತ್ರಗಳನ್ನು ತಿರುಚುತ್ತಾರೆ ಮತ್ತು ಮತಗಳ್ಳತನ ಮಾಡುತ್ತಾರೆ. ಕರ್ನಾಟಕ, ಬಿಹಾರದಲ್ಲಿ ಇದು ವ್ಯಾಪಕವಾಗಿ ನಡೆದಿದೆ ಎಂದು ಹೇಳಿದರು.
2019ರ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ನಾನು ಸೋಲು ಕಾಣಬೇಕಾಯಿತು. ತಾವು ಬಹಳಷ್ಟು ಕೆಲಸ ಮಾಡಿದ್ದು, ಜನ ಕೈಬಿಡುವುದಿಲ್ಲ ಎಂದು ಬಲವಾಗಿ ನಂಬಿದ್ದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು ಸೇರಿ ಹಲವಾರು ಪ್ರಮುಖರು ಇಲ್ಲಿಗೆ ಬಂದು ಪ್ರಚಾರ ಮಾಡಿದರು.
ಕಲಬುರಗಿ ಜಿಲ್ಲೆಯ ಐದಾರು ವಿಧಾನಸಭಾ ಕ್ಷೇತ್ರಗಳಲ್ಲಿ ಕೊಂಚ ಪ್ರಮಾಣದ ಮತಗಳು ಕಡಿಮೆಯಾಗುತ್ತಿದ್ದವು. ಅಂತಹ ಭಾಗದಲ್ಲಿ ಏಕಾಏಕಿ 20 ಸಾವಿರ, 37 ಸಾವಿರ ಮತಗಳು ಕಡಿಮೆಯಾದವು. ಇದು ಹೇಗೆ ಸಾಧ್ಯ? ಮತಯಂತ್ರಗಳನ್ನು ತಿರುಚಿರುವುದರಿಂದಲೇ ಸಾಧ್ಯವಾಗಿದೆ ಎಂದು ಹೇಳಿದರು.
ಆ ಸಂದರ್ಭದಲ್ಲಿ ಜನರಿಗೆ ನನ್ನ ಮೇಲೆ ಸಿಟ್ಟಿದೆ ಎಂದು ಭಾವಿಸಿದ್ದೆ. ಆದರೆ ಇದಕ್ಕೆ ಮತಗಳ್ಳತನ ಮತ್ತು ಮತಯಂತ್ರಗಳ ಬದಲಾವಣೆಯೇ ಕಾರಣ. ಕಣ್ಣೆದುರಿಗೆ ಈ ರೀತಿಯ ಅಕ್ರಮಗಳು ನಡೆದಾಗ ಮತಯಂತ್ರಗಳ ಮೇಲೆ ನಂಬಿಕೆ ಹೇಗೆ ಹುಟ್ಟುತ್ತದೆ ಎಂದರು.
ಮತಯಂತ್ರಗಳನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಕಾಲಕಾಲಕ್ಕೆ ಪ್ರಯೋಗಗಳು ನಡೆಯುತ್ತಿರುತ್ತವೆ. ಮತಯಂತ್ರ ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದವು. ಬಿಜೆಪಿ ಹಾಗೂ ಇತರ ಪಕ್ಷಗಳು ಮತಯಂತ್ರಗಳ ಬಗ್ಗೆ ಟೀಕೆ ಮಾಡಿದ್ದೂ ಇದೆ. ನಾವು ಮಾತನಾಡಿದರೆ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದರು.
ಪ್ರಧಾನಿಯವರು ತಮ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಖರ್ಗೆ ಸೋಲುತ್ತಾರೆ ಎಂದು ಖಚಿತವಾಗಿ ಹೇಳಿದರು. ಅಲ್ಲಿಗೆ ನನಗೆ ಅನುಮಾನ ದೃಢವಾಗಿದೆ ಎಂದು ಹೇಳಿದರು.
ದ್ವಿಭಾಷಾ ನೀತಿ ವಿಚಾರವಾಗಿ ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವಿಗೆ ಸ್ವಾಗತವಿದೆ. ಕಾಂಗ್ರೆಸ್ ಪಕ್ಷವು ರಾಷ್ಟ್ರಮಟ್ಟದಲ್ಲಿ ದ್ವಿಭಾಷಾ ನೀತಿ ಹೊಂದಿದೆ. ತಮಿಳುನಾಡು, ಕೇರಳ ರಾಜ್ಯಗಳು ಇದನ್ನು ಒಪ್ಪುವುದಿಲ್ಲ. ಈ ಹಿಂದೆ ರಾಷ್ಟ್ರಮಟ್ಟದಲ್ಲಿ ನಮ ಸರ್ಕಾರ ದ್ವಿಭಾಷಾ ನೀತಿ ತರಲು ಮುಂದಾದಾಗ ವಿರೋಧಗಳು ಕಂಡು ಬಂದಿದ್ದವು ಎಂದು ಅವರು ಹೇಳಿದರು.
ಜಿಎಸ್‌ಟಿ ಪರಿಷ್ಕರಣೆ ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷ ಜನಪರವಾಗಿ ಈ ಬೇಡಿಕೆಯನ್ನು ಮೊದಲಿನಿಂದಲೂ ಹೇಳುತ್ತಲೇ ಇತ್ತು. ಅದನ್ನು ಕೇಂದ್ರ ಸರ್ಕಾರ ಪರಿಗಣಿಸಲಿಲ್ಲ. ಈಗ ನಿರ್ಧಾರ ತೆಗೆದುಕೊಂಡಿದೆ. ಜನರಿಗೆ ಅನುಕೂಲವಾಗುವ ವಿಷಯಗಳಲ್ಲಿ ನಾನು ರಾಜಕೀಯ ಮಾಡಲು ಬಯಸುವುದಿಲ್ಲ ಎಂದರು.
ವಿರೋಧ ಪಕ್ಷಗಳ ಮಾತುಗಳನ್ನು ಪ್ರಧಾನಿಯವರು ಕಡೆಗಣಿಸುತ್ತಾರೆ. ಅವರಿಗೆ ಅಹಂಕಾರ ಜಾಸ್ತಿಯಾಗಿದೆ. ಮಾತೆತ್ತಿದ್ದರೆ ಟ್ರಂಪ್ ಎನ್ನುತ್ತಿದ್ದರು. ಈಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಇಷ್ಟು ದಿನ ಚೀನಾವನ್ನು ಟೀಕಿಸುತ್ತಿದ್ದರು. ಈಗ ಖುದ್ದಾಗಿ ಅವರೇ ಚೀನಾಗೆ ಹೋಗಿಬಂದಿದ್ದಾರೆ. ದೇಶದ ಹಿತರಕ್ಷಣೆ ವಿಚಾರದಲ್ಲಿ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದೇವೆ ಎಂದರು.