ಬೆಂಗಳೂರು,ಮೇ 14- ಹಾಸನದ ಪೆನ್‌ಡ್ರೈವ್ ಪ್ರಕರಣ ನಮಗೆ ಗೊತ್ತಿಲ್ಲದೇ ಇರುವ ಸಮಸ್ಯೆ, ಕೆಲವರಿಗೆ ನನ್ನ ಹೆಸರನ್ನು ಬಳಸಿಕೊಂಡರೆ ಪ್ರಚಾರ ಸಿಗುತ್ತದೆ ಎಂದು ಮಾತನಾಡುತ್ತಾರೆ, ಈ ವಿಚಾರದಲ್ಲಿ ನನಗೇನೂ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ತಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ವಿಡಿಯೋ ಹಾಗೂ ಆಡಿಯೋ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಯಾವುದೇ ವಿಚಾರಗಳಿಗೂ ಎಸ್‌ಐಟಿಯನ್ನು ಕೇಳಿಕೊಳ್ಳಿ, ನನಗೆ ಗೊತ್ತಿಲ್ಲದೇ ಇರುವ ವಿಚಾರ ಇದು. ನನ್ನ ಹೆಸರು ಉಪಯೋಗಿಸಿಕೊಳ್ಳುವುದರಿಂದ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು ನನ್ನ ಹೆಸರು ತೆಗೆದುಕೊಳ್ಳುತ್ತಾರೆ. ಆ ವಿಚಾರವಾಗಿ ನನಗೆ ಏನೂ ಗೊತ್ತಿಲ್ಲ ಎಂದರು.
ವಿರೋಧಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ಹಿರಿಯ ನಾಯಕ ಅಶ್ವತ್ಥನಾರಾಯಣ ಅವರು ಇದೆಲ್ಲಾ ಡಿ.ಕೆ.ಶಿವಕುಮಾರ್ ಕುತಂತ್ರ ಎಂದಿರುವುದಕ್ಕೆ ಸೂಕ್ತ ಸಮಯದಲ್ಲಿ ಉತ್ತರ ಕೊಡೋಣ ಎಂದು ತಿರುಗೇಟು ನೀಡಿದರು.
ಇಂದಿನಿಂದ ತಾವು ಎರಡು ದಿನಗಳ ಕಾಲ ಉತ್ತರ ಪ್ರದೇಶದ ರಾಯಭರೇಲಿಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ನಾಳೆ ನನ್ನ ಹುಟ್ಟುಹಬ್ಬ ಇರುವುದರಿಂದ ಯಾರೂ ಮನೆಯ ಬಳಿ ಬರಬಾರದು. ಹುಟ್ಟುಹಬ್ಬದ ಆಚರಣೆ ಮಾಡಬಾರದು ಎಂದು ಈಗಾಗಲೇ ಮನವಿ ಮಾಡಿಕೊಂಡಿದ್ದೇನೆ ಎಂದರು.
ದೇಶದ ಎಲ್ಲಾ ಕಡೆ ಒಳ್ಳೆಯ ವಾತಾವರಣವಿದೆ. ಇಂಡಿಯಾ ಕೂಟ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸವಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ನೀಡಿರುವ ಹೇಳಿಕೆ ತಿರುಗುಬಾಣವಾಗಲಿದೆ. ಲೋಕಸಭಾ ಚುನಾವಣೆಯ ಬಳಿಕ ಅವರದೇ ಜೊತೆಯಲ್ಲಿರುವ ಶಾಸಕರು ಶಿವಸೇನೆ ಹಾಗೂ ಎನ್‌ಸಿಪಿಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.