Friday, October 18, 2024
Homeರಾಜ್ಯED : ಮೊಬೈಲ್‌ ಸ್ಕ್ರೀನ್‌ಶಾಟ್‌, ಸಂಭಾಷಣೆಯಲ್ಲಿ ಚುನಾವಣೆಗೆ ಹಣ ಬಳಕೆ ಸ್ಪಷ್ಟ

ED : ಮೊಬೈಲ್‌ ಸ್ಕ್ರೀನ್‌ಶಾಟ್‌, ಸಂಭಾಷಣೆಯಲ್ಲಿ ಚುನಾವಣೆಗೆ ಹಣ ಬಳಕೆ ಸ್ಪಷ್ಟ

ಬೆಂಗಳೂರು,ಅ.16- ವಾಲೀಕಿ ಹಗರಣದ 8ನೇ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರರ ಆಪ್ತ ಸಹಾಯಕ ವಿಜಯ್‌ಕುಮಾರ್‌ ಗೌಡ ಅವರ ಮೊಬೈಲ್‌ ಸ್ಕ್ರೀನ್‌ಶಾಟ್‌ ಮತ್ತು ಹಲವು ಸಂಭಾಷಣೆಗಳು ಕರ್ನಾಟಕ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ಬಳಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ವಿಜಯ್‌ಕುಮಾರ್‌ ಗೌಡರ ಹೇಳಿಕೆಯನ್ನು ಉಲ್ಲೇಖಿಸಿದ ಇಡಿ, ನಾಗೇಂದ್ರ ಅವರ ಜಾಮೀನು ಅರ್ಜಿಗೆ ತನ್ನ ಆಕ್ಷೇಪಣೆ ವ್ಯಕ್ತ ಪಡಿಸಿದೆ, ಹಣವನ್ನು ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಮೋಸದ ಚಟುವಟಿಕೆಗಳನ್ನು ರೂಪಿಸುವಲ್ಲಿ ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರತಿಪಾದಿಸಿದೆ. ಹಗರಣದ ಹಣವನ್ನು ಅವರು ಚುನಾವಣಾ ಸಮಯದಲ್ಲಿ ನಗದು ನಿರ್ವಹಣೆ ಸೇರಿದಂತೆ ವೈಯಕ್ತಿಕ ಮತ್ತು ಚುನಾವಣಾ ವೆಚ್ಚಗಳಿಗೆ ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಣವನ್ನು ನಿಭಾಯಿಸುವಲ್ಲಿ ವಿಜಯ್‌ಕಮಾರ್‌ ಗೌಡ ತೊಡಗಿಸಿಕೊಂಡಿದ್ದು, ನೆಕ್ಕುಂಟಿ ನಾಗರಾಜ್‌ (ಏ-6) ಅವರ ಸೂಚನೆ ಮೇರೆಗೆ ಎಡರು ರುದ್ರಯ್ಯ (ಏ-25) ವಿಜಯ್‌ಕುಮಾರ್‌ ಗೌಡಗೆ ನೀಡಲು 61 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ನಾಗೇಂದ್ರ ಅವರ ನೇತೃತ್ವದ ಬುಡಕಟ್ಟು ಕಲ್ಯಾಣ ಇಲಾಖೆಯು ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಹಣವನ್ನು ತ್ವರಿತವಾಗಿ ವಿತರಿಸಲು ಕಾರ್ಯ ವಿಧಾನದ ಪರಿಶೀಲನೆಗಳನ್ನು ಮಾಡಿದೆ ಎಂದು ಇಡಿ ಹೇಳಿದೆ. ಅನುದಾನದ ಹಣ ವಿತರಿಸಲು ಮಧ್ಯ ವರ್ಷದ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಇಲಾಖೆ ವಿಫಲವಾಗಿದೆ ಎಂದಿದೆ. ಹೆಚ್ಚುವರಿಯಾಗಿ ನಾಗೇಂದ್ರ ಅವರು ತಮ ಮೂರು ಐಫೋನ್ಗಳನ್ನು ವಿಲೇವಾರಿ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.

ಇಡಿ ಆರೋಪಗಳನ್ನು ತಳ್ಳಿಹಾಕಿದ ನಾಗೇಂದ್ರ ಪರ ವಕೀಲರು ವಾದ ಮಂಡಿಸಿ, ಕಸ್ಟಡಿಯಲ್ಲಿ ದಾಖಲಾದ ಒಬ್ಬ ವ್ಯಕ್ತಿಯ ಯಾವುದೇ ಹೇಳಿಕೆಯು ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ವಿಜಯ್‌ ಕುಮಾರ್‌ ಗೌಡರ ಅಸ್ಪಷ್ಟ ಹೇಳಿಕೆಯನ್ನು ಹೊರತುಪಡಿಸಿ, ನಾಗೇಂದ್ರ ಹಗರಣದ ಹಣವನ್ನು ಬಳಸಿದ್ದಾರೆಂದು ಸೂಚಿಸಲು ಯಾವುದೇ ಗಣನೀಯ ವಸ್ತುಗಳನ್ನು ಸಂಗ್ರಹಿಸಲಾಗಿಲ್ಲ ಎಂದು ವಾದಿಸಿದ್ದರು.

ಜಾಮೀನು ಮಂಜೂರು ಮಾಡುವಾಗ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಪಿಎಂಎಲ್‌ಎ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಪೂರ್ವಭಾವಿ ಅಪರಾಧದಲ್ಲಿ ಸಿಲುಕಿಸಬೇಕಾಗಿಲ್ಲ ಎಂದು ಹೇಳಿದ್ದರು. ಆರೋಪಿ ನಂ.1 ನಾಗೇಂದ್ರರಿಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ. ಆದರೆ ಪ್ರಾಸಿಕ್ಯೂಷನ್‌ರವರು ನಾಗೇಂದ್ರರನ್ನು ಅಪರಾಧದ ಕಿಂಗ್ಪಿನ್‌ ಮತ್ತು ಮಾಸ್ಟರ್ಮೈಂಡ್‌ ಎಂದು ವಾದಿಸುತ್ತಾರೆ ಎಂದಿದ್ದರು.

RELATED ARTICLES

Latest News