ತುಮಕೂರು, ಆ.23- ಜಿಲ್ಲಾ ರೈಲ್ವೆ ಪ್ರಯಾಣಿಕರ ಒತ್ತಾಸೆಯಂತೆ ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ಪ್ರತಿಷ್ಠಿತ ವಂದೇ ಭಾರತ್ ರೈಲು ಇಂದಿನಿಂದ ತುಮಕೂರು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.
ತುಮಕೂರು ನಾಗರಿಕರ ಆಶಯದಂತೆ ವಂದೇ ಭಾರತ್ ರೈಲು ಆರಂಭದ ದಿನದಿಂದಲೇ ನಗರದಲ್ಲಿ ನಿಲುಗಡೆಗೆ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಮ ಕಾರ್ಯಬದ್ಧತೆಯಿಂದ ಈ ರೈಲು ನಿಲುಗಡೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇಂದು ಸಂಜೆ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಲಿದ್ದಾರೆ.
ಬೆಂಗಳೂರು-ತುಮಕೂರು ನಡುವೆ ಹೊಸ ಮೆಮೋ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದು, ತಿಂಗಳಾಂತ್ಯಕ್ಕೆ ಹೊಸ ಮೆಮೋ ರೈಲು ಸಂಚಾರ ಆರಂಭವಾಗಲಿದೆ. ಇದರಿಂದ ಬೆಳಗ್ಗೆ 9ರ ನಂತರ ತುಮಕೂರಿನಿಂದ ಬೆಂಗಳೂರಿಗೆ ಮತ್ತು ಸಂಜೆ 5 ಗಂಟೆ ನಂತರ ಬೆಂಗಳೂರಿನಿಂದ ತುಮಕೂರಿಗೆ ಮತ್ತೊಂದು ಪ್ಯಾಸೆಂಜರ್ ರೈಲಿನ ಅನುಕೂಲವಾಗಲಿದೆ.
ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಸೋಮಣ್ಣ ಅವರು ಆರಂಭದಿಂದಲೇ ರೈಲ್ವೆ ಪ್ರಯಾಣಿಕರ ಅಗತ್ಯತೆಗಳಿಗೆ ಸ್ಪಂದಿಸುತ್ತಿದ್ದು, ಹಂತ ಹಂತವಾಗಿ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಸಚಿವರ ಕಾರ್ಯಕ್ಕೆ ತುಮಕೂರು ರೈಲ್ವೆ ಪ್ರಯಾಣಿಕರ ವೇದಿಕೆ ಅಭಿನಂದನೆ ಸಲ್ಲಿಸಿದೆ.