ಚಿಕ್ಕಮಗಳೂರು, ಏ.8- ತಾಲೂಕಿನ ಸೀತಾಳಯ್ಯನ ಗಿರಿ ದೇವಸ್ಥಾನದಿಂದ ಮುಳ್ಳಯ್ಯನಗಿರಿ ರಸ್ತೆಗೆ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ರಸ್ತೆಯಲ್ಲಿ ಎರಡು ತಿಂಗಳಗಳ ಕಾಲ ಎಲ್ಲಾ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.
ಅತ್ಯಂತ ಕಿರಿದಾಗಿರುವ ರಸ್ತೆ ಇದಾಗಿದ್ದು ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆಯ ಅಗಲೀಕರಣ ಹಾಗೂ ಉನ್ನತೀಕರಣ ಅವಶ್ಯಕವಾಗಿದೆ.
ಉಪ ವಿಭಾಗಾಧಿಕಾರಿ ವರದಿ ಪ್ರಕಾರ ರಸ್ತೆಯು ಏರಿಳಿತಗಳಿಂದ ಕೂಡಿದ್ದು ಪ್ರಸ್ತುತ ಚರಂಡಿ, ರಸ್ತೆ ನಿರ್ಮಾಣದಂತ ಕಾಮಗಾರಿಗಳು ಕೈಗೊಳ್ಳುವಾಗ ರಸ್ತೆಯನ್ನು ಅಗೆಯಬೇಕಾದ ಅನಿವಾರ್ಯತೆ ಇರುವುದರಿಂದ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಕಾರ್ಯ ಪಾಲ ಇಂಜಿನಿಯರ್ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಇಲಾಖೆಯಿಂದಲೂ ಕೂಡ ಅಧೀಕ್ಷಕರು ಎರಡು ತಿಂಗಳ ಕಾಲ ವಾಹನ ಸಂಚಾರ ನಿಷೇಧಿಸಲು ಯಾವುದೇ ಅಭ್ಯಂತರವಿಲ್ಲವೆಂದು ವರದಿ ನೀಡಿದ್ದು ಈ ಸಂಬಂಧ ಮಾ.15ರಿಂದಲೇ ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಒಟ್ಟು ಎರಡು ತಿಂಗಳಗಳ ಕಾಲ ಈ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವನ್ನು ಮಾಡುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.