ಬೆಂಗಳೂರು,ಏ.14- ಕನ್ನಡ ಚಿತ್ರರಂಗದಲ್ಲಿ ತಮ್ಮ ಹಾಸ್ಯದ ಹೊನಲಿನ ಮೂಲಕವೇ ಪ್ರೇಕ್ಷಕರನ್ನು ನಗಿಸುತ್ತಿದ್ದ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ದನ್ (76) ಅವರು ಇಂದು ಮುಂಜಾನೆ 2.30ರ ಸಮಯದಲ್ಲಿ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ.
ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ದನ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರದ ದರ್ಶನವನ್ನು ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಏರ್ಪಡಿಸಲಾಗಿದ್ದು, ಇಂದು ಸಂಜೆಯೇ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
3 ಬಾರಿ ಹೃದಯಾಘಾತ:
ವಯೋಸಹಜ ಕಾಯಿಲೆಯಿಂದ ಮೃತಪಟ್ಟಿರುವ ಬ್ಯಾಂಕ್ ಜನಾರ್ದನ್ ಅವರು 22 ವರ್ಷಗಳ ಹಿಂದೆಯೇ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿ ಸ್ಟಂಟ್ ಕೂಡ ಅಳವಡಿಸಲಾಗಿತ್ತು. ಅಂದಿನಿಂದ ಮೂರು ಬಾರಿ ಹೃದಯಾಘಾತಕ್ಕೆ ಜನಾರ್ದನ್ ಒಳಗಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ತಮ್ಮ ಕಾಲೇಜು ಜೀವನದಿಂದಲೂ ನಾಟಕ ಹಾಗೂ ಸಿನಿಮಾಗಳ ವ್ಯಾಮೋಹ ಇಟ್ಟುಕೊಂಡಿದ್ದ ಬ್ಯಾಂಕ್ ಜನಾರ್ದನ್ ಅವರು NO ಹಾಗೂ ಕರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಹಾಸ್ಯನಟರಾಗಿದ್ದು, ತಮ್ಮ ವೃತ್ತಿ ಜೀವನದಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದಾರೆ.
ಚಿತ್ರರಂಗದ ನಂಟು:
1948ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದ ಬ್ಯಾಂಕ್ ಜನಾರ್ದನ್ ಅವರು ತಮ್ಮ ಎಸ್ಎಸ್ಎಲ್ಸಿ ಪರೀಕ್ಷೆಯ ಸಮಯದಲ್ಲೇ ಗೌಡರ ಗದ್ದಲ ಎಂಬ ನಾಟಕದಲ್ಲಿ ಜನಮನ ಸೆಳೆಯುವ ಪಾತ್ರದಲ್ಲಿ ನಟಿಸಿದ್ದರು. ಜನಾರ್ದನ್ ಅವರ ಈ ನಟನೆಯನ್ನು ಗಮನಿಸಿದ ಬಹುಬೇಡಿಕೆಯ ಹಾಸ್ಯನಟ ಧೀರೇಂದ್ರ ಗೋಪಾಲ್ ಅವರು ಪರೋಪಕಾರಿ ಸಿನಿಮಾದಲ್ಲಿ ಖಳನಟ ವಜ್ರಮುನಿಯ ಹಿಂಬಾಲಕನ ಪಾತ್ರ ಕೊಡಿಸಿದ್ದರು. ನಂತರ ಕಾಶೀನಾಥ್ ಅವರ ಅಜಗಜಾಂತರ ಸಿನಿಮಾವು ಅವರಿಗೆ ಪ್ರಮುಖ ತಿರುವು ನೀಡಿತು. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಶ್ ಚಿತ್ರದಲ್ಲಿ ಸದಾ ಎಲ್ಲರಲ್ಲೂ ಬಯ್ಯುವ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ಸೇರಿದಂತೆ ಇನ್ನು ಹಲವು ಸಿನಿಮಾಗಳ ಪಾತ್ರಗಳು ಪ್ರೇಕ್ಷಕರ ಮನಸ್ಸಲ್ಲಿ ಸದಾಕಾಲ ಉಳಿದಿವೆ.
ಸ್ಟಾರ್ ನಟರುಗಳ ಜೊತೆ ನಟನೆ:
ಚಿತ್ರರಂಗದ ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಬ್ಯಾಂಕ್ ಜನಾರ್ದನ್ ಹಾಗೂ ಜಗ್ಗೇಶ್ ಅವರ ಜೋಡಿ ಚಂದನವದಲ್ಲಿ ಸಾಕಷ್ಟು ಮೋಡಿ ಮಾಡಿತ್ತು. ಅಲ್ಲದೆ ಸ್ಟಾರ್ ನಟರುಗಳಾದ ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಶಂಕರನಾಗ್, ರವಿಚಂದ್ರನ್, ಶಿವರಾಜ್ ಕುಮಾರ್ ಸುದೀಪ್, ದರ್ಶನ್ ಸೇರಿದಂತೆ ಸ್ಯಾಂಡಲ್ವುಡ್‌ನ ಬಹುತೇಕ ಎಲ್ಲ ದೊಡ್ಡ ಕಲಾವಿದರ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಬ್ಯಾಂಕ್‌ನಲ್ಲೇ ಕೆಲಸ ಮಾಡುತ್ತಲೇ ನಟನೆ:
ಬ್ಯಾಂಕ್ ಜನಾರ್ದನ್ ಅವರಿಗೆ ಚಿತ್ರರಂಗದ ಆರಂಭದಲ್ಲಿ ಸಾಕಷ್ಟು ಅವಕಾಶಗಳು ಸಿಗದ ಕಾರ ಚಿತ್ರದುರ್ಗದ ವಿಜಯ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವಕಾಶಗಳು ಕಡಿಮೆ ಆಗಿದ್ದರಿಂದ ಬ್ಯಾಂಕ್ ಉದ್ಯೋಗದಲ್ಲೇ ಹೆಚ್ಚಾಗಿ ತೊಡಗಿಸಿಕೊಂಡು ಪ್ರಮೋಷನ್ ಪಡೆದಿದ್ದ ವೇಳೆ ಕಾಶೀನಾಥ್ ನಿರ್ದೇಶಿಸಿ, ನಟಿಸಿದ್ದ ಅಜಗಜಾಂತರ ಸಿನಿಮಾದ ನಟನೆಯು ಅವರಿಗೆ ಸಾಕಷ್ಟು ಅವಕಾಶಗಳು ಸಿಗುವಂತೆ ಮಾಡಿದ್ದರಿಂದ ಚಿತ್ರರಂಗದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು.
ಪಿತಾಮಹ, ಜನನಾಯಕ, ಗೌಂಗಣೇಶ, ತರ್ಲೆ ನನ್ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಹ್ಮಣ್ಯ,ಶ್, ಕೌರವ ಇನ್ನೂ ಮುಂತಾದ ಸಿನಿಮಾಗಳಲ್ಲಿನ ಬ್ಯಾಂಕ್ ಜನಾರ್ದನ್ ಅವರ ಅಭಿನಯವು ಪ್ರೇಕ್ಷಕರನ್ನು ರಂಜಿಸಿದೆ.
ಕಿರುತೆರೆಯ ನಂಟು:
ರಂಗಭೂಮಿ, ಹಿರಿತರೆ ಅಲ್ಲದೆ ಕಿರುತೆರೆಯಲ್ಲೂ ತಮ್ಮ ಅಭಿನಯದ ನಂಟು ಹೊಂದಿದ್ದ ಬ್ಯಾಂಕ್ ಜನಾರ್ದನ್ ಅವರು ಪಾಪಪಾಂಡು ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಹಾಸ್ಯದ ಹೊನಲು ಹರಿಸಿದ್ದಾರೆ. ಕೋಮಲ್ ನಟಿಸಿದ್ದ ಉಂಡನಾಮ ಸಿನಿಮಾದಲ್ಲಿ ಕೊನೆ ಬಾರಿ ನಟಿಸಿದ್ದ ಬ್ಯಾಂಕ್ ಜನಾರ್ದನ್ ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ನ ಸ್ಟಾರ್ ನಟರುಗಳಾದ ಶಿವರಾಜ್ ಕುಮಾರ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ಹಲವಾರು ಕಲಾವಿದರು. ಕರ್ನಾಟಕ ವಾಣಿಜ್ಯಮಂಡಳಿ ಅಧ್ಯಕ್ಷ ನರಸಿಂಹುಲು ಸೇರಿದಂತೆ ಹಲವರು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.