ಬೆಂಗಳೂರು, ಮೇ 23- ರಾಜ್ಯಸರ್ಕಾರದ ವಿವಿಧ ಹುದ್ದೆಗಳಿಗಾಗಿ ಲಾಬಿ ನಡೆಸುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದು ಮನವಿ ನೀಡುತ್ತಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಮುಂದಿನ ತಿಂಗಳು ಒಂದಷ್ಟು ನಾಮನಿರ್ದೇಶನಗಳು ಬಾಕಿ ಇವೆ. ಹೀಗಾಗಿ ಮೇಲನೆಯ ಸದಸ್ಯತ್ವ ಗಿಟ್ಟಿಸಲು ಆಕಾಂಕ್ಷಿಗಳ ದಂಡು ಹೆಚ್ಚಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲು ಗೃಹಕಚೇರಿ ಕೃಷ್ಣಾಗೆ ಆಗಮಿಸಿದರು.ಈ ವೇಳೆ ವಿವಿಧ ಹುದ್ದೆಗಳ ಆಕಾಂಕ್ಷಿಗಳು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು, ದುಂಬಾಲು ಬೀಳುವುದು ಸಾಮಾನ್ಯವಾಗಿ ಕಂಡುಬಂದಿತು.
ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ತಮ ಬಗ್ಗೆ ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು. ಹೆಜ್ಜೆಹೆಜ್ಜೆಗೂ ಆಶೀರ್ವಾದ ಪಡೆಯುವವರ ಅಡಚಣೆಯಿಂದಾಗಿ ಸಿಡಿಮಿಡಿಗೊಂಡ ಸಿದ್ದರಾಮಯ್ಯನವರು ದಾರಿ ಬಿಡುವಂತೆ ಗದರಿಸಿದರು. ಇನ್ನೂ ಕೆಲವರು ಅರ್ಜಿಗಳನ್ನು ಹಿಡಿದು ವಿವಿಧ ಕೆಲಸಗಳಿಗಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತಿದ್ದರು.
ಇತ್ತೀಚೆಗೆ ಲೋಕಸಭಾ ಚುನಾವಣೆ ಕಾರಣಕ್ಕಾಗಿ ಕಾರ್ಯಕರ್ತರ ಭೇಟಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕಡಿಮೆ ಮಾಡಿದ್ದರು. ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಗೊಂಡಿದ್ದು, ಇಂದಿನಿಂದ ಅಧಿಕೃತ ಕಾರ್ಯಕಲಾಪಗಳು ಚುರುಕು ಪಡೆದುಕೊಂಡಿವೆ.
ಇದೇ ವೇಳೆ ಕಾರ್ಯಕರ್ತರ ಆಗಮನವೂ ಹೆಚ್ಚಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬಂದ ವಿವಿಧ ಹುದ್ದೆಗಳ ಆಕಾಂಕ್ಷಿಗಳು ಸಚಿವರ ಹಾಗೂ ಪ್ರಮುಖರ ಮನೆ ಬಳಿ ಜಾತ್ರೆಯೋಪಾದಿಯಲ್ಲಿ ಜಮಾಯಿಸುತ್ತಿರುವುದು ಕಂಡುಬರುತ್ತಿದೆ.