ಬೆಂಗಳೂರು,ಡಿ.2- ವಿನಾಶ ಕಾಲೇ ವಿಪರೀತಿ ಬುದ್ದಿ ಎಂಬಂತೆ ಎಲ್ಲರಿಗೂ ಹದ್ದುಮೀರಿ ಮಾತನಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯದಲ್ಲಿ ಖಂಡಿತವಾಗಿಯೂ ವಿನಾಶ ಆಗಿಯೇ ತೀರುತ್ತಾರೆಂದು ಶಾಸಕ ಹಾಗೂ ಅಖಿಲ ಭಾರತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಯತ್ನಾಳ್ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಮಠಾಧೀಶರು, ಸ್ವಾಮೀಜಿಗಳು, ರಾಜಕಾರಣಿಗಳು ಸೇರಿದಂತೆ ನನಗೆ ಯಾರೊಬ್ಬರು ಸರಿಸಾಟಿ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಇದು ವಿಪರೀತ ಬುದ್ದಿ ವಿನಾಶ ಕಾಲೇ ಎಂಬಂತಾಗಿದೆ. ನಾನು ಸುಮನೆ ಹೇಳುವುದಿಲ್ಲ. ಅವರು ಖಂಡಿತವಾಗಿ ವಿನಾಶವಾಗುತ್ತಾರೆ ಎಂದು ಭವಿಷ್ಯ ನುಡಿದರು.
ಸಮಾನತೆ ಸಾರಿದ ಬಸವಣ್ಣನವರ ಬಗ್ಗೆಯೂ ನಾಲಿಗೆ ಹರಿಬಿಟ್ಟು ತಮ ಕೀಳು ಅಭಿರುಚಿಯನ್ನು ತೋರಿಸಿದ್ದಾರೆ. ವಿಭೂತಿ ಹಚ್ಚುವವರ ಬಗ್ಗೆಯೂ ಅವಹೇಳನ ಮಾಡುತ್ತಾರೆ ಯಾವ ಪಕ್ಷದಲ್ಲೂ ಇವರಿಗೆ ನಿಯತ್ತು ಎಂಬುದಿಲ್ಲ. ತಾನೊಬ್ಬನೇ ಹರಿಶ್ಚಂದ್ರ ಇಲ್ಲದವರೆಲ್ಲರೂ ಅಪ್ರಮಾಣಿಕರು ಎಂದುಕೊಂಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಬಿಜೆಪಿಯಲ್ಲಿದ್ದಾಗಲೂ ಅಲ್ಲಿಯೂ ನಿಷ್ಠೆಯಿಂದ ಇರಲಿಲ್ಲ. ಹೀಗಾಗಿಯೇ ಅವರನ್ನು ಕಿತ್ತು ಹಾಕಲಾಗಿತ್ತು. ಬಳಿಕ ಜೆಡಿಎಸ್ ಸೇರಿದಾಗ ಮಸೀದಿಗೆ ಹೋಗಿ ನಮಾಜ್ ಮಾಡಿ ಬಂದಿದ್ದಾರೆ.ಇದರ ಬಗ್ಗೆ ನಮ ಬಳಿ ದಾಖಲೆಗಳಿವೆ. ಟಿಪ್ಪು ಸುಲ್ತಾನ್ ಮತಾಂಧ ಎನ್ನುವ ಯತ್ನಾಳ್ ಹಿಂದೆ ಟೋಪಿ ಹಾಕಿಕೊಂಡು ಏನು ಗುಣಗಾನ ಮಾಡಿದ್ದಾರೆ ಎಂಬುದು ಅರಿವಿಲ್ಲವೇ ಎಂದು ಪ್ರಶ್ನಿಸಿದರು.
ಬಸವನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಅವಮಾನ ಮಾಡುವ ರೀತಿ ಹೇಳಿಕೆ ನೀಡಿದ್ದಾರೆ, ಬಸವಣ್ಣ ಹೊಳೆ ಹಾರಿದರು ಎಂದು ಒಮೆ ಹೇಳುತ್ತಾರೆ ಇನ್ನೊಂದು ಬಾರಿ ನಾನು ಹಾಗೇ ಹೇಳಿಯೇ ಇಲ್ಲ ಎನ್ನುತ್ತಾರೆ. ಲಿಂಗಾಯತ ಪಂಚಮಸಾಲಿ ಧರ್ಮದಲ್ಲಿ ಜನಿಸಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಜಗಜ್ಯೋತಿ ಬಸವಣ್ಣನವರ ಬಗ್ಗೆ ಹೇಡಿ ಎಂಬ ರೀತಿ ಮಾತಾಡಿದ್ದನ್ನು ಖಂಡಿಸಿದ ಕಾಶಪ್ಪನವರ್, ಯತ್ನಾಳ್ ಕ್ಷಮೆ ಕೇಳುವುದಕ್ಕೂ ಅರ್ಹರಲ್ಲ. ತಮ ಹೇಳಿಕೆಗಳನ್ನು ನಿಲ್ಲಿಸದೇ ಇದ್ದರೆ ಬಸವ ಅನುಯಾಯಿಗಳು ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ವಕ್‌್ಫ ನೋಟಿಸ್ ಬಗ್ಗೆ ಹೋರಾಟ ಮಾಡುತ್ತಿರುವುದು ಕಪಟ ನಾಟಕದಂತಿದೆ. ಇದು ಯಾವ ರೈತರ ಪರ ಹೋರಾಟವೂ ಅಲ್ಲ. ಹಿಂದೆ ಇದೇ ಯತ್ನಾಳ್ ಬಿಜೆಪಿ ಕಾಲದಲ್ಲಿ ನೊಟೀಸ್ ಕೊಟ್ಟಾಗ ಏಕೆ ಮಾತಾಡಲಿಲ್ಲ . ಆಗ ನಿಮ ಬಾಯಿ ಬಿದ್ದು ಹೋಗಿತ್ತೇ ಎಂದು ಪ್ರಶ್ನಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಗುರಿಯಾಗಿಟ್ಟುಕೊಂಡು ಯತ್ನಾಳ್ ಹೋರಾಟ ನಡೆಸುತ್ತಿದ್ದಾರೆ. ಇದು ವಿಜಯೇಂದ್ರ ಹಠಾವೋ, ಪಾರ್ಟಿ ಬಚಾವೋ ಅಷ್ಟೇ ಆಗಿದೆ ಎಂದು ಟೀಕಿಸಿದರು.