ತರೀಕೆರೆ,ಫೆ.21- ಮಗಳ ಪ್ರೀತಿ ಮೆಚ್ಚಿ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ ಹಾಕಿರುವ ಘಟನೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಪರಿಶಿಷ್ಟ ಜಾತಿಯ ಭೋವಿ ಜನಾಂಗದ ಹುಡುಗಿ, ಅದಿಕರ್ನಾಟಕ (ಮಾದಿಗ) ಜನಾಂಗದ ಹುಡುಗನನ್ನ ಭೋವಿ ಜನಾಂಗದ ಹುಡುಗಿಯ ಕುಟುಂಬವನ್ನು ಇದೇ ಭೋವಿ ಜನಾಂಗದಿಂದಲೇ ಬಹಿಷ್ಕಾರ ಹಾಕಿದ್ದಾರೆ.
ಈ ಪ್ರಕಟಣದಿಂದ ಇಂದಿಗೂ ಅಸ್ಪೃಶ್ಯತೆಯ ಅನಿಷ್ಠ ಪದ್ಧತಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ.
ಲಿಂಗದಹಳ್ಳಿ ಗ್ರಾಮದ ಜಯಮ್ಮ ಮತ್ತು ವೆಂಕಟೇಶ್ ದಂಪತಿಗೆ ನಾಲ್ಕು ಜನ ಹೆಣ್ಣು, ಒಂದು ಗಂಡು ಮಕ್ಕಳಿದ್ದು, ಅದರಲ್ಲಿ ಮೂವರು ಮಕ್ಕಳಿಗೆ ತಮ್ಮದೇ ಜನಾಂಗದವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ನಾಲ್ಕನೇ ಮಗಳು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಆದಿಕರ್ನಾಟಕದ ಜನಾಂಗದ ಹುಡುಗನನ್ನ ಪ್ರೀತಿಸಿದ್ದಳು. ಅದಕ್ಕೆ ಎರಡೂ ಮನೆಯವರು ಒಪ್ಪಿರುತ್ತಾರೆ.
ಜಯಮ್ಮನ ಉಳಿದ ಮೂರು ಮಕ್ಕಳನ್ನು ತಮ್ಮದೇ ಜನಾಂಗದವರಿಗೆ ಕೊಟ್ಟರೂ ತಮ್ಮ ಕಷ್ಟ-ಸುಖ ನೋಡಿಕೊಳ್ಳುತ್ತಿದ್ದಾರೆ. ಒಬ್ಬಳು ಗಂಡನ ಮನೆಯಿಂದ ಬಂದು ಮನೆಯಲ್ಲೇ ಇದ್ದಾಳೆ. ಮಕ್ಕಳು ಚೆನ್ನಾಗಿದ್ದರೆ ಸಾಕು ಅಂತ ಪ್ರೀತಿಸಿದವನ ಜೊತೆಯೇ ಮದುವೆ ಮಾಡಿಸಿದ್ದಾರೆ.
ಅದಕ್ಕೆ ಭೋವಿ ಜನಾಂಗದವರು ಆದಿ ಕರ್ನಾಟಕದ ಹುಡುಗನಿಗೆ ಏಕೆ ಮದುವೆ ಮಾಡಿಕೊಟ್ಟಿದ್ದೀರಾ ಎಂದು ಸ್ವಜಾತಿಯವರೆ ಕಳೆದ ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ. ಊರಲ್ಲಿ ತಮ್ಮ ಪರಿಸ್ಥಿತಿ ಕಂಡು ಮಹಿಳೆ ಜಯಮ್ಮ ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.
ಬಹಿಷ್ಕಾರಕ್ಕೆ ಕಣ್ಣೀರು ಹಾಕುತ್ತಿರುವ ಮಹಿಳೆ: ಇನ್ನು ಬಹಿಷ್ಕಾರ ಹಾಕಿರೋದು ಒಬ್ಬ ಶಿಕ್ಷಕ ಎಂದು ತಿಳಿದು ಬಂದಿದೆ. ಗ್ರಾಮದ ಭೋವಿ ಜನಾಂಗದ ಜನ ಮಾತನಾಡಿಸುವುದನ್ನೇ ಬಿಟ್ಟಿದ್ದಾರೆ. ಇವರನ್ನ ಯಾರೂ ಮಾತನಾಡಿಸುವಂತಿಲ್ಲ. ಯಾರು ಯಾವ ಕಾರ್ಯಕ್ರಮಕ್ಕೂ ಕರೆಯುವುವಂತಿಲ್ಲ. ದೇವಸ್ಥಾನಕ್ಕೂ ಹೋಗುವಂತಿಲ್ಲ, ಒಮ್ಮೆ ದೇವಸ್ಥಾನಕ್ಕೆ ಹೋದಾಗ ಹಲ್ಲೆ ಮಾಡಿ ದೇವಸ್ಥಾನದಿಂದ ಹೊರಕ್ಕೆ ಕಳಿಸಿದ ಪ್ರಸಂಗವು ನಡೆದಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಜಯಮ್ಮ ಊರಲ್ಲಿ ಅನಾಥರಂತೆ ಬದುಕುತ್ತಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ಹಾಗೂ ಗ್ರಾಮಾಂತರ ವೃತ್ತ ಸಿ.ಪಿ.ಐ. ಗಿರೀಶ್, ಲಿಂಗದಹಳ್ಳಿ ಪಿಎಸ್ಐ ಶಶಿಕುಮಾರ್ ನೇತೃತ್ವದಲ್ಲಿ ಗ್ರಾ.ಪಂ. ಸದಸ್ಯ ಮಧು, ದಲಿತ ಸಂಘಟನೆಯ ದೋರನಾಳು ಸುನೀಲ್ ಸಮ್ಮುಖದಲ್ಲಿ ಭೋವಿ ಕಾಲೋನಿಯಲ್ಲಿ ಸಭೆ ಕರೆದು ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡಿ ಬಹಿಷ್ಕಾರದಂತಹ ಆಚರಣೆಯನ್ನು ಮಾಡುವಂತಿಲ್ಲ. ಈ ರೀತಿ ಬಹಿಷ್ಕಾರ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುಲಾಗುವುದು ಎಂದು ತಿಳಿವಳುಕೆ ನೀಡಲಾಗಿರುತ್ತದೆ.