ಬೆಂಗಳೂರು, ಫೆ.14- ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2023-24ನೇ ಆರ್ಥಿಕ ಸಾಲಿನ ಆಯವ್ಯಯವನ್ನು ಮುಂದಿನ ಶುಕ್ರವಾರ (ಫೆ.17) ಬೆಳಗ್ಗೆ 10.15ಕ್ಕೆ ಮಂಡನೆ ಮಾಡಲಿದ್ದಾರೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು.
ಶೂನ್ಯ ವೇಳೆಯ ನಂತರ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಸದನದಲ್ಲಿ ಪ್ರಕಟಿಸಿದ ಅವರು, ಫೆ.20ರಂದು ಸಂಜೆ 4ಗಂಟೆಗೆ ವಿಧಾನಸೌಧದ ಮುಂಭಾಗ 15ನೇ ವಿಧಾನಸಭೆಯ ಸದಸ್ಯರ ಛಾಯಾಚಿತ್ರ ತೆಗೆಸಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಿಗದಿತ ಕಾರ್ಯಕ್ರಮಗಳು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇದ್ದರೆ, ಒಂದು ದಿನದ ಮಟ್ಟಿಗೆ ಮುಂದೂಡಿ, ಕಾರಣ ನೀಡಿ ಗೈರು ಹಾಜರಾಗಬಾರದು. ಇದು ಕೊನೆಯ ಅವೇಶನ ಆಗಿರುವುದರಿಂದ ಸದಸ್ಯರು ಕಡೇ ಪಕ್ಷ ಈ ಕಾರ್ಯಕ್ರಮಕ್ಕಾದರೂ ಬನ್ನಿ ಎಂದು ಸಲಹೆ ಮಾಡಿದರು.
ಇಂದು ಮತ್ತು ನಾಳೆ ರಾಜ್ಯಪಾಲರು ಭಾಷಣದ ಮೇಲೆ ಚರ್ಚೆಗೆ ಸಮಯ ನಿಗದಿ ಮಾಡಲಾಗಿದೆ. ಫೆ.16ರಂದು ಪ್ರಶ್ನೋತ್ತರ ಅವ ಮುಗಿದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ.
ಬಜೆಟ್ ಮಂಡನೆಯಾದ ನಂತರ ಫೆ.20, 21, 22ರಂದು ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಫೆ.23ರಂದು ಪ್ರಶ್ನೋತ್ತರ ವೇಳೆ ಬಳಿಕ ಮುಖ್ಯಮಂತ್ರಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಬಜೆಟ್ಗೆ ಅಂಗೀಕಾರ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ನಿಗದಿಯಾಗಿರುವಂತೆ ಫೆ.24 ಅವೇಶನದ ಕೊನೆಯ ದಿನವೆಂದು ಹೇಳಿದರು.
ಎಲ್ಲಾ ಸದಸ್ಯರು ಕಲಾಪಕ್ಕೆ ಬರಬೇಕು ಎಂದು ಹೇಳಿದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಫೆ.21ರಿಂದ ಸದನಕ್ಕೆ ಬರಲಾಗುವುದಿಲ್ಲ. ನೀವು ಅನುಮತಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ನಾಳೆ ಕೆಲವು ಮಸೂದೆಗಳನ್ನು ಮಂಡನೆ ಮಾಡಲಾಗುವುದು. ಒಟ್ಟು 7 ವಿಧೇಯಕಗಳಿವೆ. ಇನ್ನೂ ಕೆಲವು ವಿಧೇಯಕ ಬರಬಹುದು ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ ಎಂದರು.
#VishweshwarHegdeKageri,