Thursday, May 2, 2024
Homeರಾಜ್ಯಕೆರಳಿದ ಒಕ್ಕಲಿಗರು, ಲಿಂಗಾಯಿತರು: ಕಾವೇರಿದ ಜಾತಿ ಜನಗಣತಿ ಜ್ವಾಲೆ

ಕೆರಳಿದ ಒಕ್ಕಲಿಗರು, ಲಿಂಗಾಯಿತರು: ಕಾವೇರಿದ ಜಾತಿ ಜನಗಣತಿ ಜ್ವಾಲೆ

ಬೆಂಗಳೂರು,ನ.23- ಜಾತಿ ಜನಗಣತಿ ಎಂದು ಪರಿಗಣಿಸಲಾಗುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಗಳ ಬಗ್ಗೆ ದಿನಕ್ಕೊಂದು ಗೊಂದಲ ಸೃಷ್ಟಿಯಾಗುತ್ತಿದ್ದು, ಪರ-ವಿರೋಧ ಚರ್ಚೆಗಳು ಕಾವೇರುತ್ತಿವೆ. ವರದಿಯನ್ನು ಅಂಗೀಕರಿಸಿಯೇ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವರದಿಯನ್ನು ತಿರಸ್ಕಾರ ಮಾಡಬೇಕೆಂದು ಒಕ್ಕಲಿಗರ ಸಂಘ ನೀಡಿದ್ದ ಮನವಿಗೆ ಸರ್ಕಾರದ ಪಾಲುದಾರರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕ ಶಾಸಕರು ಸಹಿ ಹಾಕಿದ್ದಾರೆ.

ಲಿಂಗಾಯಿತ ವೀರಶೈವ ಮಹಾಸಭಾದ ಮಹಾ ಅಧಿವೇಶನದ ಬಳಿಕ ಮಾತನಾಡಿದ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ವರದಿಯನ್ನು ಸಚಿವರ ಮನೆಯಲ್ಲಿ ಕುಳಿತು ತಯಾರಿಸಲಾಗಿದ್ದು, ಅದು ಸಂಪೂರ್ಣ ಅವೈಜ್ಞಾನಿಕ, ತಿರಸ್ಕಾರರ್ಹ ಎಂದು ಹೇಳಿದ್ದರು.

ರಾಜ್ಯದ ಎರಡು ಪ್ರಮುಖ ಸಮುದಾಯಗಳನ್ನು ಪ್ರತಿಬಿಂಬಿಸುವ ಸಂಘ-ಸಂಸ್ಥೆಗಳು ಮತ್ತು ಅದರ ಪ್ರತಿನಿಧಿಗಳು ವರದಿಯನ್ನು ವಿರೋಧಿಸಿವೆ. ಇನ್ನು ಹಲವು ಸಮುದಾಯಗಳಲ್ಲೂ ಈ ರೀತಿಯ ಮಿಶ್ರ ಪ್ರತಿಕ್ರಿಯೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಪ್ರಕಾರ ವರದಿ ಮೊದಲು ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅದು ಚರ್ಚೆಯಾಗಬೇಕು. ಅನಂತರ ಸ್ವೀಕಾರವೋ, ಇಲ್ಲವೋ ಎಂಬುದರ ಬಗ್ಗೆ ನಿರ್ಣಯ ಸೂಕ್ತ ಎಂಬ ವಾದಗಳಿವೆ.

162 ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಲಾದ ವರದಿಯನ್ನು ಸ್ವೀಕರಿಸುವುದು ಬೇಡವೇ ಎಂದು ಸಿದ್ದರಾಮಯ್ಯ ನೇರವಾಗಿ ಕೇಳಿದ್ದಾರೆ. ಅದೇ ವೇಳೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೈಜ್ಞಾನಿಕವಾಗಿ ಸಮೀಕ್ಷೆಯಾಗಬೇಕು ಎಂಬ ಅಭಿಪ್ರಾಯಗಳಿವೆ. ಸರ್ಕಾರ ಯಾವುದೇ ಇದ್ದರೂ, ಅಧಿಕಾರ ಏನೇ ಇದ್ದರೂ ಸಮುದಾಯದ ಗೌರವ ಮತ್ತು ಸ್ವಾಭಿಮಾನದ ಜತೆ ತಾವು ನಿಲ್ಲವುದಾಗಿ ಹೇಳಿದ್ದಾರೆ.

ಹೇಳಿಕೆ-ಪ್ರತಿ ಹೇಳಿಕೆ ಹೊರತಾಗಿ ಹೊರ ಬಂದಿರುವ ಹೊಸ ವಿಷಯ ಎಂದರೆ ಸಮೀಕ್ಷಾ ವರದಿಯ ಹಸ್ತ ಪ್ರತಿಗಳು ನಾಪತ್ತೆಯಾಗಿವೆ ಎಂಬುದು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರೇ ಇದನ್ನು ಖಚಿತ ಪಡಿಸಿದ್ದಾರೆ. 2021ರ ಅಕ್ಟೋಬರ್ 5ರಂದು ಸರ್ಕಾರಕ್ಕೆ ಪತ್ರ ಬರೆದು ಈ ವಿಷಯವನ್ನು ತಿಳಿಸಿದ್ದರು. ಆದರೆ, ಈವರೆಗೂ ಹಸ್ತ ಪ್ರತಿಗಳನ್ನು ಹುಡುಕುವ ನಿಟ್ಟಿನಲ್ಲಿ ಯಾವುದೇ ಕ್ರಮಗಳಾಗಿಲ್ಲ. ಕನಿಷ್ಠ ತನಿಖೆಯೂ ನಡೆದಿಲ್ಲ ಎಂಬುದು ಆಘಾತಕಾರಿ ವಿಚಾರ.

ಕಾಂತರಾಜು ಅವರು ಅಧ್ಯಕ್ಷರಾಗಿದ್ದಾಗ ಸಿದ್ಧಪಡಿಸಲಾಗಿದ್ದ ಮೂಲ ವರದಿ ಕೂಡ ನಾಪತ್ತೆಯಾಗಿದೆ. ಆ ವರದಿಯ ಸದಸ್ಯ ಕಾರ್ಯದರ್ಶಿ ಹೊರತುಪಡಿಸಿ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಪೈಕಿ ಬಹುತೇಕರು ಸಹಿ ಹಾಕಿದ್ದರು. ಅದು ನಾಪತ್ತೆಯಾಗಿರುವುದರಿಂದ ಹೊಸದಾಗಿಯೇ ವರದಿ ಸಿದ್ಧಪಡಿಸಬೇಕಾಗಿದೆ.

ಸಮೀಕ್ಷೆ ನಡೆದ ಬಳಿಕ ಅದರ ದತ್ತಾಂಶಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿತ್ತು. ಆದರೆ, ಅದನ್ನು ಸಾರ್ವಜನಿಕವಾಗಿ ಮುಕ್ತಗೊಳಿಸಿರಲಿಲ್ಲ. ಜತೆಗೆ ಪ್ರತಿಯೊಂದು ಜಿಲ್ಲಾಕಾರಿಗಳ ಕಚೇರಿಯಲ್ಲೂ ದತ್ತಾಂಶಗಳು ಸಂರಕ್ಷಿಸಲ್ಪಟ್ಟಿದ್ದವೂ ಎಂದು ಹೇಳಲಾಗಿದೆ.ಈ ದತ್ತಾಂಶಗಳನ್ನು ಇಟ್ಟುಕೊಂಡು ಹೊಸದಾಗಿ ಬರೆಯಲು ಸಾಧ್ಯವಾಗಿದೆ. ಆ ಕೆಲಸವನ್ನು ಆಯೋಗ ಪ್ರಸ್ತುತ ಮಾಡುತ್ತಿದೆ.

ಆದರೆ, ಮೂಲ ಪ್ರಶ್ನೆ ಇರುವುದು ಸಮೀಕ್ಷೆ ನಡೆದಿರುವ ಮಾದರಿಯ ಬಗ್ಗೆ. ಸಮೀಕ್ಷಾಕಾರರು ಮನೆ ಮನೆಗೆ ಹೋಗಿ ಮನೆ ಮನೆಗೆ ಹೋಗಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ವಾದಿಸಲಾಗುತ್ತಿದೆ. ಆದರೆ, ಬಹಳಷ್ಟು ಮಂದಿ ತಮ್ಮ ಮನೆಗೆ ಯಾರೂ ಬಂದಿಲ್ಲ , ಮಾಹಿತಿ ಪಡೆದುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ.

ಅದರಲ್ಲೂ ಬೆಂಗಳೂರಿನಂತಹ ಮಹಾನಗರಿಯಲ್ಲಿ ಶೇ.73ರಷ್ಟು ಮಾತ್ರ ಸಮೀಕ್ಷೆ ನಡೆದಿದೆ ಎಂದು ತಿಳಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಶೇ.90ರಷ್ಟು ಮನೆಗಳಿಗೆ ಭೇಟಿ ನೀಡಲಾಗಿದೆ ಎಂದು ಸಚಿವರು ಮತ್ತು ಆಯೋಗದ ಮುಖ್ಯಸ್ಥರು ಪದೇ ಪದೇ ಹೇಳುತ್ತಿದ್ದರು.

ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವರದಿ ಅತ್ಯಂತ ನಿಖರ ಮತ್ತು ಸ್ಪಷ್ಟತೆ ಹೊಂದಿರುತ್ತದೆ ಎಂಬ ವಿಶ್ವಾಸವಿದೆ. ಅದಕ್ಕೆ ಪರ್ಯಾಯವಾಗಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬಗ್ಗೆ ಆಗಿನ ಸರ್ಕಾರವೇ ಒಂದಿಷ್ಟು ಗೊಂದಲಗಳನ್ನು ಹುಟ್ಟಿಹಾಕಿತ್ತು.

ವರದಿಯನ್ನು ಯಾರು ನೋಡಿಲ್ಲ ಎಂದು ಬಲವಾದ ಪ್ರತಿಪಾದನೆಯ ನಡುವೆಯೇ 2017ರ ಕೊನೆಯಲ್ಲಿ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತು. ಅದರ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನಗಳನ್ನು ಮುಸ್ಲಿಂ ಸಮುದಾಯ ಹೊಂದಿದೆ ಎಂಬ ವಿವರಗಳಿದ್ದವು. ಇದು ಆತಂಕಕ್ಕೆ ಕಾರಣವಾಗಿದೆ.

ತಮಿಳುನಾಡಿಗೆ ಪ್ರತಿದಿನ 2700 ಕ್ಯೂಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶ

ಈವರೆಗೂ ಯಾರೂ ಕೂಡ ಈ ಮಾಹಿತಿಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ. ವರದಿಯನ್ನು ಯಾರು ನೋಡದೇ ಇರುವುದರಿಂದ ಸ್ಪಷ್ಟನೆ ನೀಡಲು ಅವಕಾಶ ಇಲ್ಲ ಎಂಬ ಸ್ಪಷ್ಟನೆ ಇದೆ. ಆದರೆ, ಕಾಲ ಕಾಲಕ್ಕೆ ಕೇಳಿ ಬಂದಿರುವ ಕಾನೂನಾತ್ಮಕವಾಗಿ ಹೊರಗುಳಿದ ಗೊಂದಲಗಳಿಗೆ ಸಮಜಾಯಿಸಿ ನೀಡುವ ಪ್ರಯತ್ನಗಳನ್ನು ಯಾವ ಸರ್ಕಾರಗಳೂ ಮಾಡಿಲ್ಲ.

ಸಮೀಕ್ಷೆಯ ಹಸ್ತ ಪ್ರತಿಗಳು ಮತ್ತು ಮೂಲ ವರದಿ ನಾಪತ್ತೆಯಾಗಿದೆ ಎಂಬುದು ಸತ್ಯವಾಗಿದ್ದರೆ ಅದನ್ನು ಹುಡುಕಲು ಏಕೆ ಗಂಭೀರ ಪ್ರಯತ್ನಗಳು ನಡೆದಿಲ್ಲ ? 162 ಕೋಟಿ ರೂ.ಗಳ ವೆಚ್ಚದಲ್ಲಿ ಸರ್ಕಾರ ತಯಾರಿಸಿದ ವರದಿಯ ಬಗ್ಗೆ ಈ ಮಟ್ಟದ ನಿರ್ಲಕ್ಷ್ಯ ಸಮರ್ಥನೀಯವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಕನಿಷ್ಠ ಈವರೆಗೂ ಮೂಲ ಪ್ರತಿ ನಾಪತ್ತೆಯಾಗಿರುವ ಬಗ್ಗೆ ಒಂದು ದೂರನ್ನೂ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಆಂದಮೇಲೆ ಮೂಲ ಪ್ರತಿಗಳು ಯಾವುದೋ ಅಜ್ಞಾತ ಸ್ಥಳದಲ್ಲಿದೆ. ಅದು ಎಲ್ಲರಿಗೂ ಗೊತ್ತು. ಆದರೂ ಯಾರೂ ಬಹಿರಂಗವಾಗಿ ಮಾತನಾಡದೆ ಜಾಣಮೌನ ಅನುಸರಿಸುತ್ತಿದ್ದಾರೆ ಎಂಬ ಭಾವನೆಗಳು ಗಟ್ಟಿಗೊಳ್ಳುತ್ತಿವೆ. ಆಗಿದ್ದ ಮೇಲೆ ಯಾರ ಮನೆಯಲ್ಲಿ ಹಸ್ತ ಪ್ರತಿಗಳು ಅಡಗಿ ಕುಳಿತಿವೆ ಎಂಬ ಸತ್ಯವನ್ನು ಈಗಲಾದರೂ ಬಹಿರಂಗಪಡಿಸುವ ಅಗತ್ಯವಿದೆ.

ಆಯೋಗದಲ್ಲೇ ಇದೆ ಎಂದಾದರೆ ಅದನ್ನಾದರೂ ಸಾರ್ವಜನಿಕವಾಗಿ ತಿಳಿಸಬೇಕಿದೆ. ವರದಿಯ ಬಗ್ಗೆ ನಿಷ್ಪಕ್ಷವಾಗಿ ನಿರ್ಣಯ ಕೈಗೊಳ್ಳಬೇಕು ಎಂಬ ಕಾಳಜಿ ಸರ್ಕಾರಕ್ಕೆ ಇದ್ದಿದೇ ಆದರೆ, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬಹುದಿತ್ತು. ವಿರೋಧ ಅಥವಾ ಅನುಮಾನ ವ್ಯಕ್ತಪಡಿಸುವ ಸಂಘ-ಸಂಸ್ಥೆಗಳು, ಸರ್ವಪಕ್ಷಗಳ ಜತೆ ಸಮಾಲೋಚನೆ ನಡೆಸುವ ಅವಕಾಶವಿತ್ತು.

ಮತ್ತೊಂದೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ. ಪ್ರಸ್ತುತ ದಿನಮಾನಗಳ ತಂತ್ರಜ್ಞಾನ ಅತ್ಯಾಧುನಿಕವಾಗಿದೆ. ಆಧಾರ್ ಬಯೋಮೆಟ್ರಿಕ್ ಆಧಾರಿತ ಸಮೀಕ್ಷೆಗೆ ಅವಕಾಶಗಳಿವೆ. ಸಾರ್ವಜನಿಕರಿಗೆ ಸ್ವಯಂ ಸಮೀಕ್ಷೆಯಲ್ಲಿ ಭಾಗವಹಿಸಲು ಮನವಿ ಮಾಡಬಹುದು. ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ನಕಲು ಅಥವಾ ಅಪ್ರಸ್ತುತ ಮಾಹಿತಿಗಳು ಸೇರ್ಪಡೆಗೊಳ್ಳುವ ಸಾಧ್ಯತೆಗಳು ಕಡಿಮೆ.

ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಹಕಾರ ನೀಡುತ್ತೇವೆ : ರಮೇಶ್ ಜಾರಕಿಹೊಳಿ

ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಬೇಕು ಎಂಬ ಸಾಂಪ್ರದಾಯಿಕ ಪದ್ಧತಿಯನ್ನು ಬದಿಗಿಟ್ಟು ಹೊಸ ವಿಧಾನಗಳನ್ನು ಅನುಸರಿಸುವ ಅವಕಾಶಗಳಿವೆ. ಆದರೆ, ಎಲ್ಲವನ್ನೂ ನಿರ್ಲಕ್ಷಿಸಿ 8 ವರ್ಷಗಳ ಹಿಂದಿನ ವರದಿಯನ್ನೇ ಸಾರ್ವಜನಿಕವಾಗಿ ಪ್ರಕಟಿಸುವ ಇರಾಧೆಯನ್ನು ಸರ್ಕಾರ ಹೊಂದಿದೆ. ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳೇ ಪ್ರಮುಖವಾಗಿ ಕಾಣಿಸುತ್ತಿರುವುದು ಸತ್ಯ.

RELATED ARTICLES

Latest News