Saturday, July 27, 2024
Homeರಾಜ್ಯಇಂದು ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರಗಳ ಚುನಾವಣೆ : ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ

ಇಂದು ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರಗಳ ಚುನಾವಣೆ : ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ

ಬೆಂಗಳೂರು, ಜೂ.3- ಲೋಕಸಭಾ ಚುನಾವಣೆ ಬೆನ್ನಲ್ಲೇ ನಡೆಯುತ್ತಿರುವ ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರಗಳ ಚುನಾವಣೆ ಮತದಾನ ಇಂದು ಬಿರುಸಿನಿಂದ ಸಾಗಿತು.ಆಗ್ನೇಯ, ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರ, ಈಶಾನ್ಯ, ನೈರುತ್ಯ ಮತ್ತು ಬೆಂಗಳೂರು ಪದವೀಧರ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಶಿಕ್ಷಕರು, ಪದವೀಧರ ಮತದಾರರು ಇಂದು ಬೆಳಿಗ್ಗೆಯಿಂದಲೇ ಆಗಮಿಸಿ ತಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಿತ್ತಿದ್ದುದು ಕಂಡುಬಂದಿತು.

ಬೆಳಿಗ್ಗೆ ಆರಂಭವಾದ ಮತದಾನ ಸಂದರ್ಭದಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಹೊತ್ತು ಕಳೆದಂತೆ ಮತದಾರರ ಸಂಖ್ಯೆ ಮತಗಟ್ಟೆಗೆ ಆಗಮಿಸುತ್ತಿದ್ದುದು ಹೆಚ್ಚಾಗಿದ್ದು ಕಂಡುಬಂದಿತು.ಮತಗಟ್ಟೆಯ ಹೊರಭಾಗದಲ್ಲಿ ತಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದೂ ಕೂಡ ಕಂಡುಬಂದಿತು.

ಆಗ್ನೇಯ ಶಿಕ್ಷಕರ ವಿಧಾನಪರಿಷತ್‌ ಚುನಾವಣಾ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಇಲ್ಲಿನ ಚಿಕ್ಕಬಳ್ಳಾಪುರ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿಯಲ್ಲಿ ನಡೆದ ಮತದಾನದಲ್ಲಿ ಮತದಾರರು ಉತ್ಸುಕತೆಯಿಂದ ಆಗಮಿಸಿ ಮತ ಚಲಾಯಿಸಿದರು.

ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್‌‍ ಪಕ್ಷದ ಅಭ್ಯರ್ಥಿ ಟಿ.ಡಿ.ಶ್ರೀನಿವಾಸ್‌‍ ಅವರ ಪರವಾಗಿ ಬೆಂಬಲಿಗರು, ಕಾರ್ಯಕರ್ತರು ಮತದಾರರ ಮನವೊಲಿಸುತ್ತಿದ್ದುದು ಕಂಡುಬಂದಿತು.ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಗೆ ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮತದಾನ ಮಾಡಿದರು.

ಶಿಕ್ಷಕರ ಕ್ಷೇತ್ರದ ಬಿಜೆಪಿ ಬೆಂಬಲಿತ ಜೆಡಿಎಸ್‌‍ ಅಭ್ಯರ್ಥಿ ಎಸ್‌‍.ಎಲ್‌.ಬೋಜೇಗೌಡ ಮತದಾನ ನಡೆಯುತ್ತಿರುವ ಬೇಲೂರು ರಸ್ತೆಯಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈರುತ್ಯ ಪದವೀಧರ ಹಾಗೂ ಆಗ್ನೇಯ ಶಿಕ್ಷಕರ, ನೈರುತ್ಯ ಶಿಕ್ಷಕರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ 6 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸೇರಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದು, 4.33 ಲಕ್ಷ ಮತದಾರರು ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ.

6 ಕ್ಷೇತ್ರಗಳ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್‌‍ ಮತ್ತು ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍, ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದರೆ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍, ಜೆಡಿಎಸ್‌‍ ನಡುವೆ ಹಣಾಹಣಿ ಏರ್ಪಟ್ಟಿದೆ.

ವಿಧಾನಪರಿಷತ್‌ನಲ್ಲಿ ಬಹುಮತ ಸಾಧಿಸಲು ಹವಣಿಸುತ್ತಿರುವ ಕಾಂಗ್ರೆಸ್‌‍ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ ಮೇಲನೆಯಲ್ಲಿ ಸಭಾಪತಿ ಮತ್ತು ಉಪಸಭಾಪತಿ ಸ್ಥಾನವನ್ನು ತಮ ಬಳಿಯೇ ಉಳಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಿದೆ.ಶಿಕ್ಷಕ, ಪದವೀಧರ ಮತದಾರರು ಯಾರ ಕಡೆ ವಾಲಲಿದ್ದಾರೆ? ಪಕ್ಷೇತರ ಅಭ್ಯರ್ಥಿಗಳು ಯಾರಿಗೆ ಕಂಠಕವಾಗಲಿದ್ದಾರೆ? ಎಂಬುದು ಜೂನ್‌ 6 ರಂದು ನಡೆಯುವ ಮತ ಎಣಿಕೆ ಸಂದರ್ಭದಲ್ಲಿ ಗೊತ್ತಾಗಲಿದೆ.

RELATED ARTICLES

Latest News