ನವದೆಹಲಿ,ಡಿ.6- ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರ ಆಸನದಲ್ಲಿ ಭಾರೀ ಮೊತ್ತದ 500 ರೂ.ಗಳ ಕಂತೆ ಕಂತೆ ನೋಟು ಪತ್ತೆಯಾಗಿರುವುದು ಭಾರೀ ವಿವಾದ ಸೃಷ್ಟಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಭಾಧ್ಯಕ್ಷರಾದ ಜಗದೀಶ್ ಧನಕರ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್,ಇದು ಬಿಜೆಪಿ ಸೃಷ್ಟಿಸಿರುವ ಸುಳ್ಳಿನ ಕಂತೆ ಎಂದು ತಿರುಗೇಟು ನೀಡಿದೆ. ರಾಜ್ಯಸಭೆಯಲ್ಲಿ ಅಭಿಷೇಕ್ ಮನು ಸಿಂಘ್ವಿ ಅವರಿಗೆ 222 ಸಂಖ್ಯೆಯ ಆಸನವನ್ನು ನಿಗದಿಪಡಿಸಲಾಗಿತ್ತು. ಸಂಸತ್ನ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದಾಗ 50 ಸಾವಿರಕ್ಕೂ ಹೆಚ್ಚು ನಗದು ಪತ್ತೆಯಾಗಿದ್ದು, ತಕ್ಷಣವೇ ವಶಪಡಿಸಿಕೊಳ್ಳಲಾಗಿದೆ.
ತಕ್ಷಣವೇ ಭದ್ರತಾ ಅಧಿಕಾರಿಗಳು ರಾಜ್ಯಸಭೆಯ ಸಭಾಪತಿ ಜಗದೀಶ್ ಧನಕರ್ ಗಮನಕ್ಕೆ ತಂದರು. ಈ ಹಣವನ್ನು ಯಾವ ಕಾರಣಕ್ಕಾಗಿ ತರಲಾಗಿತ್ತು? ಇದರ ಉದ್ದೇಶವೇನು? ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಆಗ್ರಹಿಸಿದರು.
ನಿಯಮಗಳ ಪ್ರಕಾರ ಸಂಸತ್ನಲ್ಲಿ ಯಾವುದೇ ಸದಸ್ಯರು ದೊಡ್ಡ ಮೊತ್ತದ ನಗದನ್ನು ತರುವಂತಿಲ್ಲ. ಒಂದು ವೇಳೆ ತಂದರೆ ಅದನ್ನು ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಮನು ಸಿಂಘ್ವಿ ಹಣ ತಂದಿದ್ದರ ಉದ್ದೇಶದ ಬಗ್ಗೆ ನಾನಾ ಪ್ರಶ್ನೆಗಳು ಎದ್ದಿವೆ.
ಬೆಳಗ್ಗೆ ಸದನ ಆರಂಭವಾದಾಗ ಎರಡು ಬಾರಿ ಮುಂದೂಡಲಾಗಿತ್ತು. ಉದ್ಯಮಿ ಗೌತಮ್ ಅದಾನಿ ಮತ್ತು ಸಂಭಾಲ್ ಪ್ರಕರಣವನ್ನು ಮುಂದಿಟ್ಟುಕೊಂಡು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದಾಗ ಎರಡು ಬಾರಿ ಸದನವನ್ನು ಮುಂದೂಡಲಾಯಿತು.
ಸದಸ್ಯರು ಸದನದಿಂದ ಹೊರ ಹೋದಾಗ ಭದ್ರತಾ ಅಧಿಕಾರಿಗಳು ಆಸನಗಳನ್ನು ತಪಾಸಣೆ ನಡೆಸುವುದು ಸಂಪ್ರದಾಯವಾಗಿದೆ. ನಿಯಮದಂತೆ ಭದ್ರತಾ ಅಧಿಕಾರಿಗಳು ಆಸನ ಸಂಖ್ಯೆ 222ರ ಬಳಿ ಬಂದಾಗ ನಗದು ಪತ್ತೆಯಾಗಿದೆ.
ತನಿಖೆಗೆ ಆಗ್ರಹ:
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆ.ಪಿ.ನಡ್ಡಾ, ಸದಸ್ಯರೊಬ್ಬರು ದೊಡ್ಡ ಮೊತ್ತದ ಹಣವನ್ನು ತಂದಿರುವುದರ ಹಿಂದೆ ಸಂಶಯಗಳು ವ್ಯಕ್ತವಾಗುತ್ತಿವೆ. ನಿಯಮಗಳ ಪ್ರಕಾರ ಇಷ್ಟು ಹಣವನ್ನು ತರುವಂತಿಲ್ಲ. ಇದು ಅತ್ಯಂತ ಗಂಭೀರವಾದ ಪ್ರಕರಣ. ಅಲ್ಲದೆ ಸದನದ ಘನತೆ ಮೇಲೆ ನಡೆದ ದಾಳಿಯಾಗಿದೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ತನಿಖೆಗೆ ಆದೇಶ ಮಾಡಬೇಕೆಂದು ನಾನು ಸಭಾಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ಈ ಹಿಂದೆಯೂ ಸದನದಲ್ಲಿ ಹಣ ಪತ್ತೆಯಾದಾಗ ತನಿಖೆಗೆ ಆದೇಶ ಮಾಡಲಾಗಿತ್ತು. ಈಗ ಅದೇ ರೀತಿ ತನಿಖೆಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.
ಖರ್ಗೆ ತಿರುಗೇಟು:
ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯವರು ಸದನ ನಡೆಯಬಾರದೆಂದು ಮಾಡಿರುವ ವ್ಯವಸ್ಥಿತ ಷಡ್ಯಂತ್ರ. ಅದಾನಿ ಮತ್ತು ಸಂಭಲ್ ಪ್ರಕರಣವನ್ನು ವಿಷಯಾಂತರ ಮಾಡಲು ಸುಳ್ಳು ಸೃಷ್ಟಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಮುಗಿಬಿದ್ದರು.
ತನಿಖೆ ನಡೆಯುವ ಮೊದಲೇ ಸಭಾಧ್ಯಕ್ಷರು ಇದು ಇಂಥವರ ಆಸನದಲ್ಲಿಯೇ ಸಿಕ್ಕಿದೆ ಎಂದು ಹೇಳುವುದು ಸರಿಯಲ್ಲ . ಸತ್ಯಾಸತ್ಯತೆ ಹೊರಬರುವ ಮೊದಲೇ ನೀವೇ ತೀರ್ಪು ಬರೆಯುವುದಾದರೆ ಹೇಗೆ ಸಭಾಧ್ಯಕ್ಷರನ್ನು ಪ್ರಶ್ನೆ ಮಾಡಿದರು.
ಹಣ ನನ್ನದಲ್ಲ:
ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಅಭಿಷೇಕ್ ಮನು ಸಿಂಘ್ವಿ, ಇದು ನನ್ನ ವಿರುದ್ಧ ಬಿಜೆಪಿ ನಡೆಸಿರುವ ಷಡ್ಯಂತ್ರ. ನಾನು ಬೆಳಗ್ಗೆ ಸದನಕ್ಕೆ ಬಂದಾಗ ನನ್ನ ಬಳಿ ಕೇವಲ 500 ರೂ. ನೋಟಿತ್ತು. 11.30 ಮತ್ತು 12.30ಕ್ಕೆ ಸದನದಿಂದ ಹೊರಹೋದಾಗ ಕೇವಲ 500 ರೂ.ನ 1 ನೋಟನ್ನು ಇಟ್ಟುಕೊಂಡಿದ್ದೆ. ಇದಕ್ಕಿದ್ದಂತೆ ನನ್ನ ಆಸನದಲ್ಲಿ ಬಳಿ ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತೆಂದು ಪ್ರಶ್ನಿಸಿದರು.
ನಾನು ತನಿಖೆಗೆ ಹೆದರುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕೆಂಬುದು ಆಗ್ರಹ. ಆದರೆ ತನಿಖೆಗೆ ಮೊದಲೇ ನನ್ನ ಆಸನದ ಬಳಿ ಇತ್ತು ಎಂದು ಹೇಳುವ ಮೂಲಕ ನನ್ನ ಚಾರಿತ್ರ್ಯವಧೆ ನಡೆದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲೂ ಗದ್ದಲ : ಇದೇ ಪ್ರಕರಣ ಲೋಕಸಭೆಯಲ್ಲೂ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಆಸನ ಸಂಖ್ಯೆ ಮತ್ತು ಸಂಸದರ ಹೆಸರನ್ನು ಸೂಚಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಒಬ್ಬ ಜವಾಬ್ದಾರಿತ ಸಚಿವರಾಗಿ ಸಂಸತ್ಗೆ ನಗದು ತರಬಾರದೆಂಬುದು ಅವರಿಗೆ ಗೊತ್ತಿಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಸತ್ಯಾಸತ್ಯತೆ ಹೊರಬರಲು ತನಿಖೆಯ ಅಗತ್ಯತೆಯನ್ನು ಪ್ರತಿಪಾದಿಸಿದರು.