Thursday, May 2, 2024
Homeರಾಜಕೀಯಚುನಾವಣೆ ನಂತರ ಜೆಡಿಎಸ್ ಎಲ್ಲಿರುತ್ತೆ ಕಾದು ನೋಡಿ : ಡಿಕೆಶಿ

ಚುನಾವಣೆ ನಂತರ ಜೆಡಿಎಸ್ ಎಲ್ಲಿರುತ್ತೆ ಕಾದು ನೋಡಿ : ಡಿಕೆಶಿ

ಬೆಂಗಳೂರು,ಏ.16- ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ಪಕ್ಷ ಎಲ್ಲಿ ನಿಂತಿರುತ್ತದೆ ಎಂಬುದನ್ನು ಕಾದುನೋಡಿ, ನನ್ನಂಥವರನ್ನು ಕಳೆದುಕೊಂಡರೆ ಸಮುದಾಯವನ್ನು ಕಳೆದುಕೊಂಡಂತೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ನಾನು ಸದಾಕಾಲ ಗೌರವ ಕೊಡುತ್ತೇನೆ, ಈಗಲೂ ಕೊಡುತ್ತೇನೆ, ಮುಂದೆಯೂ ಕೊಡುತ್ತೇನೆ. ಹಿರಿಯರಿಗೆ ಗೌರವ ಕೊಟ್ಟಾಗ ಅದನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ನಾನು ವೈಯಕ್ತಿಕವಾಗಿ ಕುಮಾರಸ್ವಾಮಿಯವರನ್ನು ಗೌರವಿಸುತ್ತೇನೆ. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಸಮುದಾಯಕ್ಕೆ ಗೌರವ ಕೊಟ್ಟು ಅವರು ಏನೇ ಟೀಕೆ ಮಾಡಿದರೂ ನಾನು ಸಹಿಸಿಕೊಂಡಿದ್ದೆ. ಎಲ್ಲದಕ್ಕೂ ಒಂದು ಮಿತಿಯಿದೆ ಎಂದರು. ವೈಯಕ್ತಿಕವಾಗಿ ದಾಳಿ ನಡೆಸುವುದು, ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದಾರೆ ಎನ್ನುವುದು, ಬಂಡೆ, ಕಲ್ಲು ಹೊಡೆದು, ಚೂರಿ ಹಾಕಿಬಿಟ್ಟ, ವಿಷ ಕೊಟ್ಟ ಎಂದೆಲ್ಲಾ ಮಾತನಾಡಿದರೆ ಎಷ್ಟು ಎಂದು ಸಹಿಸಿಕೊಳ್ಳಲು ಸಾಧ್ಯ? ಎಂದು ತಿರುಗೇಟು ನೀಡಿದರು.

ಹೌದು, ಬಂಡೆ ಒಡೆದಿದ್ದೇನೆ. ನನ್ನ ಆಸ್ತಿ, ನನ್ನ ಜಮೀನಿನಲ್ಲಿ ಕಲ್ಲು ಹೊಡೆದ ಬದುಕಿದ್ದೇನೆ. ಮಕ್ಕಳ ಕಾಲಕ್ಕೆ ಸಾಕು ಎಂದು ನಿಲ್ಲಿಸಿದ್ದೇನೆ. ಅದನ್ನು ಎಷ್ಟು ಬಾರಿ ರಾಜಕೀಯವಾಗಿ ಬಳಸಿ ಟೀಕೆ ಮಾಡುತ್ತಾರೆ. ಆಸ್ತಿ ಗಳಿಕೆ ವಿಚಾರವಾಗಿ ಬಹಿರಂಗ ಚರ್ಚೆಗೆ ಬರುವಂತೆ ನಾನು ಹಲವು ಬಾರಿ ಸವಾಲು ಹಾಕಿದ್ದೇನೆ. ಅವರು ಅದನ್ನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಅದನ್ನು ನಿಲ್ಲಿಸುತ್ತೇನೆ. ಲೋಕಸಭಾ ಚುನಾವಣೆ ಬಳಿಕ ಈ ಬಗ್ಗೆ ಮಾತನಾಡೋಣ ಎಂದರು.

ಕುಮಾರಸ್ವಾಮಿಯವರು ಗ್ರಾಮೀಣ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ನೀಡಿದ್ದ ಹೇಳಿಕೆಯನ್ನು ವಿಷಯಾಂತರಿಸಲು ನಾನಾ ರೀತಿಯ ಚರ್ಚೆಗಳಾಗುತ್ತಿವೆ. ಬಿಜೆಪಿಯವರು ಮಾಧ್ಯಮಗಳ ಕಚೇರಿಗಳಿಗೆ ಹೋಗಿ ವಿಷಯವನ್ನು ಇಲ್ಲಿಗೇ ನಿಲ್ಲಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿವಾದಿತ ಹೇಳಿಕೆ ನೀಡಿ ಎಂದು ಅವರಿಗೆ ಹೇಳಿದ್ದು ಯಾರು? ಒಮ್ಮೆ ಮಾತನಾಡಿದ ಮೇಲೆ ಕೇಸು ಹೋಯಿತು. ಅದನ್ನು ಸೈಡಿಗಿಡಿ. ಜನರ ಮನಸ್ಸಿಗೆ ಆಗಿರುವ ನೋವನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು.ಕುಮಾರಸ್ವಾಮಿಯವರ ಹೇಳಿಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ್ದಲ್ಲ. ಇದು ರಾಜ್ಯದ ವಿಚಾರ. ಮಹಿಳೆಯರ ಸ್ವಾಭಿಮಾನಕ್ಕೆ ಸಂಬಂಧಪಟ್ಟ ವಿಷಯ ಎಂದು ಹೇಳಿದರು.

ಚುನಾವಣೆಯಲ್ಲಿ ನಮ್ಮ ಹೋರಾಟದ ಆದ್ಯತೆ ಬಿಜೆಪಿ ವಿರುದ್ಧ ಮಾತ್ರ. ಕುಮಾರಸ್ವಾಮಿ ಹೇಳಿಕೆಗೆ ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಯಾರು, ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಮೊದಲು ಅವರು ಉತ್ತರ ನೀಡಲಿ ಎಂದರು.ಆರ್.ಅಶೋಕ್ ಹೇಳಿದಂತೆ, ನಾನು ನಾಯಕನೇ ಅಲ್ಲ. ನನ್ನನ್ನು ನಾಯಕ ಎಂದು ಹೇಳಿದವರು ಯಾರು? ಅವರು ದೊಡ್ಡ ನಾಯಕರು. ವಿರೋಧಪಕ್ಷದ ನಾಯಕರಾಗಿದ್ದಾರೆ. ನಾನು ಸಾಮಾನ್ಯ ಪ್ರತಿನಿಧಿ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ ಮಧ್ಯಾಹ್ನ 12.30 ಕ್ಕೆ ಮಂಡ್ಯಕ್ಕೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಕೋಲಾರಕ್ಕೆ ತೆರಳಿ ಮತಯಾಚನೆ ಮಾಡಲಿದ್ದಾರೆ ಎಂದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರಿಗೆ ಮನವಿ ಮಾಡಲಾಗಿತ್ತು. ರಾಜ್ಯದಲ್ಲಿ ಒಂದು ದಿನ ಪ್ರಚಾರ ನಡೆಸುವಂತೆ ಕೇಳಿಕೊಂಡಿದ್ದೇವೆ. ಅವರು ದಿನಾಂಕ ನೀಡುತ್ತಿದ್ದಾರೆ. ಆದರೆ ಸಮಯ ಹೊಂದಾಣಿಕೆಯಾಗುತ್ತಿಲ್ಲ. ಬೇರೆಬೇರೆ ರಾಜ್ಯಗಳಲ್ಲಿ ಪ್ರಿಯಾಂಕ ಗಾಂಧಿಯವರ ಪ್ರಚಾರಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ಹೇಳಿದರು.

RELATED ARTICLES

Latest News