Friday, October 11, 2024
Homeರಾಜ್ಯಕೇಡರ್ ಕಂಟ್ರೋಲ್ ಮೂಲಕ ಚಂದ್ರಶೇಖರ್ ಮೇಲೆ ಕ್ರಮ ಕೈಗೊಳ್ಳುತ್ತೇವೆ : ಜೋಶಿ ಎಚ್ಚರಿಕೆ

ಕೇಡರ್ ಕಂಟ್ರೋಲ್ ಮೂಲಕ ಚಂದ್ರಶೇಖರ್ ಮೇಲೆ ಕ್ರಮ ಕೈಗೊಳ್ಳುತ್ತೇವೆ : ಜೋಶಿ ಎಚ್ಚರಿಕೆ

We will take action against Chandrasekhar through cadre control

ಹುಬ್ಬಳ್ಳಿ, ಸೆ.29- ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಲೋಕಾಯುಕ್ತ ಎಡಿಜಿಪಿಗೆ ಏನಾದರೂ ಸೇವಾ ನಿಯಮಗಳ ಬಗ್ಗೆ ಜ್ಞಾನವಿದ್ದರೆ ತಕ್ಷಣ ಕ್ಷಮಾಪಣೆ ಕೇಳಲಿ ಎಂದು ಸೂಚಿಸಿದರು.ಒಬ್ಬ ಜನಪ್ರತಿನಿಧಿ, ಅದರಲ್ಲೂ ಕೇಂದ್ರ ಸಚಿವರ ಬಗ್ಗೆ ಅಸಭ್ಯ ಭಾಷೆಯಲ್ಲಿ, ಕೆಟ್ಟ ಪದ ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೇಡರ್ ಕಂಟ್ರೋಲ್ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಯಾವತ್ತೂ ಯಾರ ಬಗ್ಗೆಯೂ ಅಸಭ್ಯ ಭಾಷೆ ಬಳಸಿದವರಲ್ಲ. ಈ ಅಧಿಕಾರಿ ಬಗ್ಗೆಯೂ ಹಾಗೆಲ್ಲ ಏಕವಚನದಲ್ಲಿ ಮಾತನಾಡಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪದದಲ್ಲಿ ಸಂಬೋಧನೆ ಮಾಡಿರುವುದು ಅಧಿಕಾರಿಯ ಅಹಂಕಾರದ ಪರಮಾವಧಿಯಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸರ್ಕಾರದ ಆದೇಶವಿದ್ದರೆ ತನಿಖೆ ನಡೆಸಲಿ. ಕುಮಾರಸ್ವಾಮಿ ಆರೋಪ ಮಾಡಿದ್ದರೆ, ಗೌರವಯುತ ಭಾಷೆಯಲ್ಲಿ, ಸಭ್ಯ ಪದಗಳಲ್ಲಿ ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಈ ರೀತಿ ಕೆಟ್ಟದಾಗಿ ಸಂಬೋಧಿಸುವುದು ಯಾವುದೇ ಅಧಿಕಾರಿಗಳಿಗೂ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.

ಒಬ್ಬ ಜನಪ್ರತಿನಿಧಿ ಬಗ್ಗೆ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದು ಮುಂದೆ ಕಾಂಗ್ರೆಸ್ಗೆ ಮುಳುವಾಗಲಿದೆ. ಕಾಂಗ್ರೆಸ್ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆಯಲ್ಲವೇ ಎಂದು ಅವರು ಕಿಡಿ ಕಾರಿದರು.ರಾಜ್ಯದಲ್ಲಿ ಈ ಸರ್ಕಾರವೇ ಶಾಶ್ವತವಾಗಿ ಇರೋದಿಲ್ಲ. ಸ್ವಲ್ಪ ಎಚ್ಚರ ವಹಿಸಿ ಮಾತನಾಡಿ, ಕೆಲಸ ಮಾಡಿ ಎಂದು ಚಂದ್ರಶೇಖರ್ಗೆ ಜೋಶಿ ಚಾಟಿ ಬೀಸಿದರು.

RELATED ARTICLES

Latest News