ವಾಷಿಂಗ್ಟನ್,ಜು.28- ಅಮೆರಿಕದ ಹಾಲಿ ಅಧ್ಯಕ್ಷ ಬೈಡೆನ್ ಅವರನ್ನು ಬಲವಂತವಾಗಿ ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗಿರಿಸಲಾಗಿದೆ. ಇದು ಡೆಮಾಕ್ರಟಿಕ್ ಪಾರ್ಟಿಯ ಪಿತೂರಿಯಾಗಿದೆ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ಶನಿವಾರ ಮಿನ್ನೆಸೋಟಾದಲ್ಲಿನ ಚುನಾವಣಾ ರ್ಯಾಲಿಯೊಂದರಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.ಇದು ನಿಜವಾಗಿಯೂ ಡೆಮಾಕ್ರಟಿಕ್ ಪಕ್ಷದ ಒಂದು ಒಳಸಂಚಾಗಿದೆ. 14 ದಶಲಕ್ಷ ಮತಗಳನ್ನು ಹೊಂದಿರುವ ಅಧ್ಯಕ್ಷರ ವಿರುದ್ಧದ ಪಿತೂರಿಯಾಗಿದೆ. ಬೈಡೆನ್ ಮುಂದುವರಿಯಲು ಇಚ್ಛಿಸಿದ್ದರು. ಆದರೆ ಅವರ ಪಕ್ಷ ಅದಕ್ಕೆ ಅವಕಾಶ ನೀಡಲಿಲ್ಲ. ಪಕ್ಷವು ಅವರನ್ನು ಭಯಾನಕವಾಗಿ ನಡೆಸಿಕೊಂಡಿದೆ ಎಂದು ಟ್ರಂಪ್ ನುಡಿದಿದ್ದಾರೆ.
ನೀವು ನಿರ್ಗಮಿಸದಿದ್ದರೆ 25ನೇ ತಿದ್ದುಪಡಿ ಬಳಸಬೇಕಾಗುತ್ತದೆ ಎಂದು ಅವರಿಗೆ ಬೆದರಿಕೆಯೊಡ್ಡಲಾಗಿದೆ ಎಂದು 78 ವರ್ಷ ವಯಸ್ಸಿನ ಟ್ರಂಪ್ ಆರೋಪಿಸಿದ್ದಾರೆ.ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಗೆ ಕಾಂಗ್ರೆಸ್ ಅನುಮೋದನೆ ನೀಡಿದ್ದು ಇದು ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಹತ್ಯೆ ಬಳಿಕ ಅಧ್ಯಕ್ಷರ ಉತ್ತರಾಧಿಕಾರ ಕುರಿತದ್ದಾಗಿದೆ.
25ನೇ ತಿದ್ದುಪಡಿಯು ಓರ್ವ ಅಧ್ಯಕ್ಷರು ದೈಹಿಕವಾಗಿ ಅಸಮರ್ಥರು ಎಂದು ತೋರಿಬಂದರೆ ಅವರನ್ನು ಪದಚ್ಯುತಗೊಳಿಸಲು ಉಪಾಧ್ಯಕ್ಷರು ಮತ್ತು ಸಚಿವ ಸಂಪುಟಕ್ಕೆ ಅಧಿಕಾರ ನೀಡುತ್ತದೆ.