ಬೆಂಗಳೂರು,ಆ.28- ಪ್ರಭಾವಿ ಸಚಿವರ ಸೂಚನೆ ಮೇರೆಗೆ ನಟ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳು ರಾಜಾತಿಥ್ಯ ನೀಡಿದ್ದಾರೆಂದು ತಿಳಿದುಬಂದಿದೆ. ಈ ಪ್ರಭಾವಿ ಸಚಿವರು ದರ್ಶನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಜೈಲಿನ ಅಧಿಕಾರಿಗಳಿಗೇ ಮೌಖಿಕವಾಗಿ ತಿಳಿಸಿದ್ದರೆಂದು ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ದರ್ಶನ್ಗೆ ಹೆಚ್ಚಿನ ಸವಲತ್ತುಗಳನ್ನು ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ನೀಡಿರುವುದು ಇದೀಗ ಬಹಿರಂಗಗೊಂಡಿದೆ.
ಜೈಲಿನ ಒಳಗಡೆ ಖೈದಿಗಳಿಗೆ ಹಾಗೂ ವಿಚಾರಣಾಧೀನ ಖೈದಿಗಳಿಗೆ ಯಾವುದೇ ವಸ್ತು ನೀಡಬೇಕಾದರೂ ಜೈಲಿನ ಉನ್ನತ ಅಧಿಕಾರಿಗಳ ಅನುಮತಿ ಬೇಕು. ಚೇರು, ಟಿಪಾಯಿ, ಹಾಸಿಗೆ, ಮಂಚ ಈ ರೀತಿಯ ಯಾವುದೇ ವಸ್ತುಗಳನ್ನು ನೀಡಬೇಕಾದರೂ ಅನುಮತಿ ಅಗತ್ಯ. ವೈದ್ಯರು ಸೂಚಿಸಿದರೆ ಮಾತ್ರ ಅವುಗಳನ್ನು ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಮಾರ್ಗಸೂಚಿ ಪ್ರಕಾರವೇ ವಿಚಾರಣಾಧೀನ ಕೈದಿಗಳಿಗೆ ಸೌಲಭ್ಯ ಒದಗಿಸಬೇಕು.
ದರ್ಶನ್ಗೆ ರಾಜಾತಿಥ್ಯ ನೀಡಿದ ಫೋಟೋ ವೈರಲ್ಲಾಗುತ್ತಿದ್ದಂತೆ ಈಗಾಗಲೇ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ 9 ಮಂದಿಯ ತಲೆದಂಡವೂ ಆಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತನಿಖೆ ನಡೆಸಿ ನಟ ದರ್ಶನ್ನನ್ನು ಬಂಧಿಸಿದ ಸಂದರ್ಭದಲ್ಲೇ ಈ ಪ್ರಭಾವಿ ಸಚಿವರು ಈ ಪ್ರಕರಣದಿಂದ ದರ್ಶನ್ನನ್ನು ಪಾರು ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.
ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಸಚಿವರು ಪ್ರಕರಣದಿಂದ ದರ್ಶನ್ ಅವರನ್ನು ಕೈಬಿಡುವಂತೆ ಒತ್ತಡ ಹಾಕಿದ್ದರು. ಕೊನೆಗೆ ಈ ಸಚಿವರು ಮುಖ್ಯಮಂತ್ರಿ ಹಾಗೂ ಗೃಹಸಚಿವರ ಮನೆಗೆ ಹೋಗಿ ಪರಿ ಪರಿಯಾಗಿ ಬೇಡಿಕೊಂಡಿದ್ದರು. ಆದರೆ ಅವರಿಗೆ ಸಿಎಂ ಹಾಗೂ ಗೃಹಸಚಿವರು ಬುದ್ದಿವಾದ ಹೇಳಿ ಕಳುಹಿಸಿದ್ದರು.
ತನ್ನ ಹಠ ಬಿಡದ ಸಚಿವರು ಜೈಲು ಅಧಿಕಾರಿಗಳಿಗೆ ಒತ್ತಡ ಹಾಕಿ ದರ್ಶನ್ಗೆ ರಾಜಾತಿಥ್ಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಇದೀಗ ಈ ಸಚಿವರು ಪೇಚಿಗೆ ಸಿಲುಕಿದ್ದಾರೆ.