Sunday, July 7, 2024
Homeರಾಜಕೀಯಯಾರಾಗ್ತಾರೆ ಜೆಡಿಎಸ್‌‍ ರಾಜ್ಯಾಧ್ಯಕ್ಷ..?

ಯಾರಾಗ್ತಾರೆ ಜೆಡಿಎಸ್‌‍ ರಾಜ್ಯಾಧ್ಯಕ್ಷ..?

ಬೆಂಗಳೂರು,ಜೂ.11- ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿರುವುದರಿಂದ ಜೆಡಿಎಸ್‌‍ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಮುಕ್ತರಾಗಲಿದ್ದಾರೆ.ಲೋಕಸಭೆಗೆ ಕುಮಾರಸ್ವಾಮಿಯವರು ಚುನಾಯಿತರಾಗಿರುವುದರಿಂದ ವಿಧಾನಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸ್ಥಾನ ತೆರವಾಗಲಿದೆ.

ಜೆಡಿಎಸ್‌‍ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಯಾರಾಗಬಹುದು ಎಂಬ ಚರ್ಚೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಜೆಡಿಎಸ್‌‍ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರವೂ ಮುನ್ನಲೆಗೆ ಬಂದಿದೆ.ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಹಿರಿಯ ಶಾಸಕರಾದ ಎಚ್‌.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ವೆಂಕಟಶಿವಾರೆಡ್ಡಿ ಅವರ ಹೆಸರುಗಳು ಪ್ರಸ್ತಾಪವಾಗುತ್ತಿವೆ. ಇನ್ನು ಜೆಡಿಎಸ್‌‍ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್‌ ಕುಮಾರಸ್ವಾಮಿಯವರ ಹೆಸರು ಪ್ರಸ್ತಾಪವಾಗುತ್ತಿದೆ.

ನಿಖಿಲ್‌ ಕುಮಾರಸ್ವಾಮಿಯವರಿಗೆ ಬಡ್ತಿ ನೀಡಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದರ ಜೊತೆಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.ಪ್ರಸ್ತುತವಾಗಿ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ವಿಧಾನಪರಿಷತ್‌ ಚುನಾವಣೆಯಲ್ಲಿ ಮೂರು ಮಂದಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ಬದಲಿಗೆ ಬೇರೆ ಸಮುದಾಯಕ್ಕೆ ನೀಡುವುದು ಸೂಕ್ತ ಎಂದು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕುರುಬ ಇಲ್ಲವೇ ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡುವುದು ಸೂಕ್ತ. ಲೋಕಸಭೆ ಚುನಾವಣೆ ನಂತರ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ಕಾರ್ಯಕರ್ತರಲ್ಲೂ ಉತ್ಸಾಹ ಮೂಡಿದೆ. ಬೇರೆ ಸಮುದಾಯಕ್ಕೂ ಅವಕಾಶ ಮಾಡಿಕೊಟ್ಟರೆ ಮತ್ತಷ್ಟು ಪಕ್ಷಕ್ಕೆ ಶಕ್ತಿ ಬರುತ್ತದೆ. ಎಲ್ಲಾ ಸಮುದಾಯಗಳೂ ಒಗ್ಗೂಡಿ ಪಕ್ಷ ಸಂಘಟನೆ ಮಾಡಲು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌‍ ಕೋರ್‌ಕಮಿಟಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಒಂದೇ ಸಮುದಾಯಕ್ಕೆ ಅಧಿಕಾರ ಹಂಚಿಕೆಯಾಗುವುದು ಬೇಡ. ಬೇರೆಬೇರೆ ಸಮುದಾಯಗಳಿಗೂ ಪಕ್ಷದ ಸ್ಥಾನಮಾನಗಳನ್ನು ನೀಡುವುದರಿಂದ ಮುಂದಿನ ನಗರ, ಸ್ಥಳೀಯ ಸಂಸ್ಥೆಗಳ, ಜಿಲ್ಲಾ, ತಾಲ್ಲೂಕು, ಪಂಚಾಯಿತಿ ಚುನಾವಣೆಗಳಿಗೂ ಅನುಕೂಲವಾಗಲಿದೆ. ಇಲ್ಲದಿದ್ದರೆ, ಬೇರೆ ಸಮುದಾಯಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಲಿದ್ದು, ಎದುರಾಳಿಗಳಿಗೆ ಅಸ್ತ್ರವೂ ಆಗಬಹುದು ಎಂಬ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

RELATED ARTICLES

Latest News