ಬೆಂಗಳೂರು,ಮಾ.24- ಹನಿಟ್ರ್ಯಾಪ್ ಬಗ್ಗೆ ವಿಧಾನಸಭೆ ಯಲ್ಲಿ ಹೇಳಿಕೆ ನೀಡಿ ಭಾರಿ ಸಂಚಲನ ಮೂಡಿಸಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ನಾಲ್ಕು ದಿನಗಳಾದರೂ ದೂರು ನೀಡದೇ ತಟಸ್ಥವಾಗಿರುವುದು ಕುತೂಹಲ ಕೆರಳಿಸಿದೆ.
ಹನಿಟ್ರ್ಯಾಪ್ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದ್ದೇ ಆಕಸಿಕವಾಗಿ. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಔಪಚಾರಿಕವಾಗಿ ವಿಧಾನಸಭೆಯಲ್ಲಿ ವಿಷಯ ಹೇಳಿದರು. ಅದನ್ನು ನಿರ್ಲಕ್ಷಿಸಬಹುದಾಗಿದ್ದರೂ ಸಚಿವ ರಾಜಣ್ಣ ತಕ್ಷಣವೇ ಪ್ರತಿಕ್ರಿಯಿಸಿ ತಮ ಮೇಲೂ ಹನಿಟ್ರ್ಯಾಪ್ ಯತ್ನ ಆಗಿದೆ. ಕರ್ನಾಟಕ ಸಿಡಿ, ಪೆನ್‌ಡ್ರೈವ್‌ಗಳ ಫ್ಯಾಕ್ಟರಿಯಾಗುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರೋಧಪಕ್ಷಗಳಿಗೆ ಹೊಸ ಅಸ್ತ್ರ ಒದಗಿಸಿದೆ.
ಒಂದು ವೇಳೆ ಹನಿಟ್ರ್ಯಾಪ್ ಆಗಿದ್ದರೆ ಮೊದಲು ಪಕ್ಷದ ಒಳವಲಯದಲ್ಲಿ ಪ್ರಸ್ತಾಪಿಸಿ ನಂತರ ಬಹಿರಂಗ ಹೇಳಿಕೆ ನೀಡಬಹುದಿತ್ತು. ಆದರೆ ಏಕಾಏಕಿ ಸದನದಲ್ಲೇ ವಿಚಾರ ಪ್ರಸ್ತಾಪಿಸುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದಾರೆ ಎಂಬ ಆಕ್ಷೇಪಗಳು ಕೇಳಿಬಂದಿದ್ದವು. ರಾಜಣ್ಣ ಅವರ ಪ್ರಸ್ತಾಪಕ್ಕೆ ಸದನದಲ್ಲೇ ಉತ್ತರಿಸಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು.
ರಾಜಣ್ಣ ಕೂಡ ತಕ್ಷಣವೇ ಲಿಖಿತ ಉತ್ತರ ನೀಡುವುದಾಗಿ ತಿಳಿಸಿದರು. ಆದರೆ ನಾಲ್ಕು ದಿನಗಳಾದರೂ ಈವರೆಗೂ ದೂರು ದಾಖಲಾಗಿಲ್ಲ.ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ರಾಜಣ್ಣ ಈವರೆಗೂ ದೂರು ನೀಡಿಲ್ಲ. ದೂರು ಬರದ ಹೊರತು ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹನಿಟ್ರ್ಯಾಪ್ ಎಂಬುದೇ ಬೋಗಸ್ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದಕ್ಕೆ ಪರಮೇಶ್ವರ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದೊಂದು ಸೂಕ್ಷ್ಮ ಪ್ರಕರಣ. ದೂರು ಬಂದರೆ ತನಿಖೆ ಮಾಡುತ್ತೇವೆ ಎಂದಿದ್ದಾರೆ.ಕಾಂಗ್ರೆಸ್‌ನಲ್ಲಿ ದಿನೇದಿನೇ ಗೊಂದಲ ಹೆಚ್ಚಾಗುತ್ತಿದೆ. ಹನಿಟ್ರ್ಯಾಪ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಕರ್ನಾಟಕ ಭವನ ಕಾಮಗಾರಿ ಉಸ್ತುವಾರಿಗಾಗಿ ದೆಹಲಿಗೆ ತೆರಳುತ್ತಿರುವುದಾಗಿ ಸತೀಶ್ ಜಾರಕಿಹೊಳಿಯವರು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ವಾತಾವರಣವೇ ಬೇರೆ ಇದೆ. ಈ ಮೊದಲು ರಾಜಣ್ಣ ಅವರ ಪರವಾಗಿ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ ಗರ್ಜಿಸುವ ಹುಲಿಗಳನ್ನು ಬ್ಲಾಕ್‌ಮೇಲ್ ಮಾಡುವ ಪ್ರಯತ್ನಗಳಾಗುತ್ತಿವೆ. ರಾಜಣ್ಣ ಅವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನಗಳಾಗಿತ್ತು ಎಂದು ಹೇಳಿದರು.ಈಗ ಅದೇ ಸತೀಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿರುವುದು, ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಮುಂದಾಗಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ.