ಬೆಂಗಳೂರು,ಮೇ8- ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಶ್ಲೀಲ ವಿಡಿಯೋವಿದ್ದ ಪೆನ್‌ಡ್ರೈವ್ ಹಂಚಿಕೆ ಮಾಡಿರುವ ಆರೋಪಿಗಳನ್ನು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ. ಎಸ್‌ಐಟಿ ತನಿಖೆಯ ಗುರಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಮೇಲೆ ಮಾತ್ರ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯ ಮಹಿಳಾ ಆಯೋಗ ಬರೆದಿದ್ದ ಪತ್ರದಲ್ಲಿ ವಿಡಿಯೋ ಬಹಿರಂಗಪಡಿಸಿದವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದಿದ್ದರು. ಇದುವರೆಗೂ ಏನೂ ಮಾಡಿಲ್ಲ ಏಕೆ? ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್‌ನ ಮಾಜಿ ಕಾರು ಚಾಲಕ ಕಾರ್ತಿಕ್ ಅವರಿಗೆ ಖಾಸಗಿ ಚಾನಲ್‌ನಲ್ಲಿ ಕುಳಿತು ಟ್ರೈನಪ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಂಡೆ ರಕ್ಷಣೆ ಮಾಡಬಹುದೆಂದು ಕಾರ್ತಿಕ್ ಅಂದುಕೊಂಡಿರಬಹುದು. ಕಾರ್ತಿಕ್ ಗಿರಿನಗರದಲ್ಲೇ ಇದ್ದಾರಂತೆ ಆದರೂ ಏಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದರು.
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್, ಕಾರ್ತಿಕ್, ಶ್ರೇಯಸ್ ಅವರಿಗೆ ನೋಟಿಸ್ ಕೊಟ್ಟಿಲ್ಲ. ರೇವಣ್ಣ ಅವರಿಗೆ ಮಾತ್ರ ಕೊಟ್ಟಿದ್ದಾರೆ ಎಂದ ಅವರು, ಡಿಸಿಎಂ ಶಿವಕುಮಾರ್ ಅವರು ವಕೀಲ ದೇವರಾಜೇಗೌಡ ಅವರ ಬಳಿ ಏಕೆ ಮಾತನಾಡಿದರು, ಅವರಲ್ಲಿ ಏನು ಕೆಲಸವಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿ, ಎಸ್‌ಐಟಿ ಅಧಿ ಕಾರಿಗಳಿಗೆ ವಿಶ್ವಾಸರ್ಹತೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ನಿವೃತ್ತ ಐಪಿಎಸ್ ಅಧಿ ಕಾರಿ ಕೆಂಪಯ್ಯ ಅವರನ್ನು ಮುಂದಿಟ್ಟುಕೊಂಡು ನನ್ನನ್ನು ಬಂಧಿಸಲು ಮುಂದಾಗಿದ್ದರು. ವಕೀಲರು ವಿಚಾರಣೆಗೆ ಹೋಗಬೇಡಿ ಎಂದು ಸಲಹೆ ಮಾಡಿದ್ದರಿಂದ ನಾನು ಹೋಗಿರಲಿಲ್ಲ. ಒಂದು ದಿನವಾದರೂ ನನ್ನನ್ನು ಅರೆಸ್ಟ್ ಮಾಡಬೇಕೆಂದಿದ್ದರು. ಯಾವ ಪ್ರಕರಣವನ್ನು ತಾರ್ಕಿಕ ಅಂತ್ಯ ಮಾಡಿಲ್ಲ ಎಂದರು.
ತೋಟದ ಮನೆಯಲ್ಲಿ ಅಪಹರಣವಾಗಿದ್ದಾರೆ ಎಂಬ ಮಹಿಳೆಯನ್ನು ಕರೆತಂದಿರುವುದಾಗಿ ಹೇಳುತ್ತಿದ್ದಾರೆ. ಇನ್ನು ಮಹಜರು ಮಾಡಿಲ್ಲ. ಆಕೆ ಸಿಕ್ಕಿದ್ದು ಸಂಬಂಧಿ ಕರ ಮನೆಯಲ್ಲಿ, ಹುಣಸೂರಿನ ಪವಿತ್ರ ಎಂಬುವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ. ತೋಟದ ಮನೆಯಲ್ಲ ಎಂದು ಸ್ಪಷ್ಟಪಡಿಸಿದರು.ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ರೇವಣ್ಣ ಅವರ ಪರವಾಗಿ ಮಾತ್ರ ಹೋರಾಟ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.