ಕರ್ನೂಲ್, ಮಾ.27- ಕಾಮದೇವನನ್ನು ಪುರುಷರು ಮಹಿಳೆಯರ ವೇಷಭೂಷಣದಲ್ಲಿ ಪೂಜಿಸಿದರೆ ಅವರಿಗೆ ಸುಖ ಸಮೃದ್ಧಿ ಸಿಗುತ್ತದ್ದಂತೆ. ಏನಪ್ಪಾ ಇದು ಹೊಸ ಐಡಿಯಾ ಅಂದುಕೊಂಡೀರಾ…. ಇದು ಕೇವಲ ಐಡಿಯಾ ಅಲ್ಲಿ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಅದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದ ಜನರ ನಂಬಿಕೆ.
ಹೌದು ಈ ಗ್ರಾಮದ ಜನರು ಅನಾದಿ ಕಾಲದಿಂದಲೂ ಪ್ರತಿ ಹೋಳಿ ಹಬ್ಬದ ಸಂದರ್ಭದಲ್ಲಿ ಈ ವಿಶಿಷ್ಟ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.ಇಲ್ಲಿನ ಪುರುಷರು ಹೋಳಿ ಹಬ್ಬದ ದಿನ ಮಹಿಳೆಯರಂತೆ ಆಕರ್ಷಕವಾಗಿ ಸೀರೆ, ರವಿಕೆ ತೊಟ್ಟು ಒಡವೆ ಹಾಕಿಕೊಂಡು ಮಹಿಳೆಯರು ನಾಚುವಂತೆ ರೆಡಿಯಾಗಿ ಕಾಮದೇವನನ್ನು ವಿಧ ವಿಧವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ.
ಪುರುಷರು ಮಹಿಳೆಯರ ವೇಷಭೂಷಣದಲ್ಲಿ ರತಿ ಮನ್ಮಥ ದೇವರಿಗೆ ಗೌರವ ಸಲ್ಲಿಸುವ ದೃಶ್ಯವು ಸಂಪ್ರದಾಯ ಮತ್ತು ನಂಬಿಕೆಯ ನಿರಂತರ ಮನೋಭಾವವನ್ನು ಸಂಕೇತಿಸುತ್ತದೆ ಎಂದು ಅಲ್ಲಿನವರು ಹೇಳಿಕೊಂಡಿದ್ದಾರೆ.ಹೋಳಿ ಹಬ್ಬದಂದು ಕಾಮದೇವನನ್ನು ಪುರುಷರು ಮಹಿಳೆಯರ ವೇಷಭೂಷಣದಲ್ಲಿ ಪೂಜಿಸಿದರೆ, ಕುಟುಂಬವು ಸಂತೋಷ ಮತ್ತು ಸಮೃದ್ಧಿಯನ್ನು ಭಗವಂತನಿಂದ ಆಶೀರ್ವದಿಸುತ್ತದೆ ಎಂದು ಅಲ್ಲಿನ ಜನ ನಂಬಿದ್ದಾರೆ.
ಅನಾದಿ ಕಾಲದಿಂದಲೂ ಈ ವಿಶಿಷ್ಠ ಆಚರಣೆ ನಡೆಸಿಕೊಂಡು ಬರುತ್ತಿದ್ದೇವೆ ಆಧುನಿಕ ಕಾಲದಲ್ಲೂ ನಮ್ಮ ಸಂಪ್ರದಾಯಗಳನ್ನು ಬಿಟ್ಟುಕೊಡಲು ನಾವು ಸಿದ್ದರಿಲ್ಲ. ಹೀಗಾಗಿ ಈಗಲೂ ನಾವು ಹೋಳಿ ಹಬ್ಬದ ಸಮಯದಲ್ಲಿ ಕಾಮದೇವನನ್ನು ಪೂಜಿಸಿಕೊಂಡು ಬರುತ್ತಿದ್ದೇವೆ ಮುಂದಿನ ದಿನಗಳಲ್ಲೂ ನಮ್ಮ ಈ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಸಂತೆಕೂಡ್ಲೂರು ಗ್ರಾಮದ ಜನ.