ಗುಬ್ಬಿ,ಫೆ.19– ಪ್ರೀತಿಸಿ ಮದುವೆಯಾಗಿ ಮುದ್ದಾದ ಎರಡು ಮಕ್ಕಳಿದ್ದರೂ ಪತ್ನಿ ಗಂಡನಿಗೆ ಮೋಸ ಮಾಡಿ ತನ್ನ ಮಾಜಿ ಪ್ರಿಯಕರನೊಂದಿಗೆ ಓಡಿಹೋಗಿದ್ದು, ನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್ ನಿವಾಸಿ ನಾಗೇಶ್ ಮೃತಪಟ್ಟ ಆತ್ಮಹತ್ಯೆ ಮಾಡಿಕೊಂಡ ಪತಿ. ಈತ ರಂಜಿತಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಹೊಟ್ಟೆಪಾಡಿಗಾಗಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ರಂಜಿತಾ ತನ್ನ ಕೆಲಸದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಯಶಸ್ವಿ 13 ವರ್ಷಗಳ ದಾಂಪತ್ಯ ನಡೆಸಿದ್ದರು. ಈ ನಡುವೆ ಆಕೆಗೆ ತನ್ನ ಹಳೆಯ ಪ್ರಿಯಕರನ ಸಂಪರ್ಕ ಬೆಳೆದು ತನ್ನ ಕುಟುಂಬವನ್ನು ನಿರ್ಲಕ್ಷಿಸುತ್ತಿದ್ದಳು ಎಂದು ಹೇಳಲಾಗಿದೆ.
ಈ ವಿಚಾರವಾಗಿ ದಂಪತಿಯಲ್ಲಿ ಆಗಾಗ್ಗೆ ಮನಃಸ್ತಾಪ, ವಾದ-ವಿವಾದಗಳು ನಡೆಯುತ್ತಿದ್ದವು. ಕೆಲವು ದಿನಗಳ ಹಿಂದೆ ರಂಜಿತಾ ಗಂಡನ ಬಿಟ್ಟು ಹಳೇ ಲವ್ವರ್ ಜೊತೆ ಓಡಿ ಹೋಗಿದ್ದಾಳೆ. ಇದರಿಂದ ನೊಂದ ನಾಗೇಶ್ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಫೇಸ್ ಬುಕ್‌ನಲ್ಲಿ ವಿಡಿಯೋ ಮಾಡಿ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ನನ್ನ ಸಾವಿಗೆ ಪತ್ನಿಯೇ ಮತ್ತು ಆಕೆಯ ಪ್ರಿಯಕರನೇ ಕಾರಣ ಎಂದು ದೂರಿದ್ದಾನೆ. ಅಡಿಕೆ ವ್ಯಾಪಾರಿಯಾಗಿದ್ದ ನಾಗೇಶ್, ಇಸ್ಪೀಟ್ ಜೂಜಿಗೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತಿರಿಸಲು ಕೆಲ ತಿಂಗಳ ಹಿಂದಷ್ಟೇ ಗುಬ್ಬಿ ಪಟ್ಟಣದಲ್ಲಿದ್ದ ಸ್ವಂತ ಮನೆ ಮಾರಾಟ ಮಾಡಿದ್ದ. ನಂತರ ಒಂದಿಷ್ಟು ಹಣವನ್ನು ವ್ಯಾಪಾರಕ್ಕಾಗಿ ಉಳಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.