Thursday, November 21, 2024
Homeರಾಜ್ಯಚನ್ನಪಟ್ಟಣ ಉಪಚುನಾವಣೆಯಲ್ಲಿ ಅಖಾಡಕ್ಕಿಳಿಯುವ ಸುಳಿವು ಕೊಟ್ಟ ಡಿ.ಕೆ.ಸುರೇಶ್‌..?

ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಖಾಡಕ್ಕಿಳಿಯುವ ಸುಳಿವು ಕೊಟ್ಟ ಡಿ.ಕೆ.ಸುರೇಶ್‌..?

Will DK Suresh contest in Channapatna by-election?

ಬೆಂಗಳೂರು,ಅ.20- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಈವರೆಗೂ ಪ್ರತಿಪಾದಿಸುತ್ತಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್‌ ಇದ್ದಕ್ಕಿದ್ದಂತೆ ಯೂ ಟರ್ನ್‌ ಪಡೆದಿದ್ದು, ಹೈಕಮಾಂಡ್‌ ಮತ್ತು ಪಕ್ಷದ ಪ್ರಮುಖರ
ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.

ನಿನ್ನೆ ಚನ್ನಪಟ್ಟಣ ಕ್ಷೇತ್ರದ ಪ್ರಮುಖರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮಾಲೋಚನೆ ನಡೆಸಿದ್ದರು. ಆ ವೇಳೆ ಉಪಚುನಾವಣೆಗೆ ಸ್ಪರ್ಧಿಸಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಾಗಿದೆ. ಸಾಮಾನ್ಯ ಕಾರ್ಯಕರ್ತನಾಗಿ ನಿಮ ನಡುವೆ ಇರಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ನನ್ನ ಭಾವನೆಗಳನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ. ಆದರೆ ನನಗೆ ಪಕ್ಷ ಅನಿವಾರ್ಯ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತಂತೆ ಪಕ್ಷಕ್ಕೆ ನಾನು ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ನಾಮಪತ್ರ ಸಲ್ಲಿಸಲು ಇನ್ನೂ ಐದು ದಿನ ಕಾಲಾವಕಾಶವಿದೆ. ಜೆಡಿಎಸ್‌‍-ಬಿಜೆಪಿಯವರು ಯಾರನ್ನು ಅಭ್ಯರ್ಥಿ ಮಾಡುತ್ತಾರೆ ಎಂದು ಕಾದು ನೋಡುತ್ತೇವೆ.

ಆಕಾಂಕ್ಷಿಗಳೆಲ್ಲಾ ಮೊದಲು ನಾಮಪತ್ರ ಹಾಕಲಿ. ಮೂರ್ನಾಲ್ಕು ದಿನಗಳಲ್ಲಿ ಕಾಂಗ್ರೆಸ್‌‍ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಈ ನಡುವೆ ತಾವು ಎಐಸಿಸಿ ಅಧ್ಯಕ್ಷರೂ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಚನ್ನಪಟ್ಟಣ ಕ್ಷೇತ್ರದ ಜನತೆ ಲೋಕಸಭೆ ಚುನಾವಣೆ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ನನಗೆ ಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಾನು ನಿಮ ಜೊತೆ ಇರುವುದಾಗಿ ನಿನ್ನೆಯ ಸಭೆಯಲ್ಲಿ ಕಾರ್ಯಕರ್ತರಿಗೆ ಭರವಸೆ ನೀಡಿದ್ದೇನೆ ಎಂದರು.

ಜೆಡಿಎಸ್‌‍-ಬಿಜೆಪಿಯ ಮೈತ್ರಿ ಎನ್‌ಡಿಎ ಕೂಟದಿಂದ ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಚನ್ನಪಟ್ಟಣವನ್ನು ಜೆಡಿಎಸ್‌‍ಗೆ ಬಿಟ್ಟು ಕೊಟ್ಟಂತೆ ಕಾಣುತ್ತಿದೆ. ಇಲ್ಲಿ ಯಾರು ಅಭ್ಯರ್ಥಿಯಾಗಬೇಕೆಂದು ಆ ಪಕ್ಷದ ಮುಖಂಡರು ನಿರ್ಧರಿಸುತ್ತಾರೆ. ಈ ಮೊದಲು ಕುಮಾರಸ್ವಾಮಿಯವರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದು ನನಗೆ ಸಂಬಂಧಪಟ್ಟ ವಿಚಾರವಲ್ಲ. ಮೇಲ್ನೋಟಕ್ಕೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಎನ್‌ಡಿಎನಲ್ಲಿ ಗೊಂದಲ ಇದ್ದಂತಿಲ್ಲ ಎಂದರು.

ತಮ ಹೆಸರು ಪ್ರಬಲವಾಗಿ ಕೇಳಿಬರುತ್ತಿರುವುದರ ಕುರಿತು ಕಾದು ನೋಡುವುದಾಗಿ ಹೇಳಿ ಕುತೂಹಲ ಕೆರಳಿಸಿದರು. ಈ ಮೊದಲು ಉಪಚುನಾವಣೆಯ ಸ್ಪರ್ಧೆಯ ವಿಚಾರ ಬಂದಾಗಲೆಲ್ಲಾ ಡಿ.ಕೆ.ಸುರೇಶ್‌ ಜಾರಿಕೊಳ್ಳುತ್ತಿದ್ದರು. ಜನ ನನಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಅದರಂತೆ ನಾನು ವಿಶ್ರಾಂತಿ ಪಡೆಯುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡ ತಮ ಕುಟುಂಬದಿಂದ ಯಾರೂ ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ನಿನ್ನೆ ಸಭೆಯ ಬಳಿಕ ಡಿ.ಕೆ.ಸುರೇಶ್‌ ಉಪಚುನಾವಣೆಯ ಸ್ಪರ್ಧೆಯ ಬಗ್ಗೆ ಪರೋಕ್ಷವಾಗಿ ಒಲವು ತೋರಿಸಿದಂತೆ ಕಂಡುಬಂದಿದೆ.
ಜನ ಬಯಸುವುದಾದರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಪ್ರತಿಪಾದಿಸಲಾರಂಭಿಸಿದ್ದಾರೆ. ಮೇಲ್ನೋಟಕ್ಕೆ ಇದು ಹಲವು ದಿನಗಳಿಂದ ಕೆರಳಿಸಿದ್ದ ಕುತೂಹಲಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಂತಾಗಿದೆ.

ಏಕವಚನದಲ್ಲಿ ವಾಗ್ದಾಳಿ :
ರಾಜ್ಯಸರ್ಕಾರ ಆರು ತಿಂಗಳ ಮೇಲೆ ಅಧಿಕಾರದಲ್ಲಿರುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್‌, ಕುಮಾರಸ್ವಾಮಿಯವರೂ ಕೂಡ ಕೇಂದ್ರ ಸಚಿವನಾಗಿರುವುದಿಲ್ಲ. ಆರು ತಿಂಗಳ ನಂತರ ಮನೆಗೆ ಹೋಗುತ್ತಾರೆ. ಅವರಿಗಷ್ಟೇ ಮಾತನಾಡಲು ಬರುವುದಲ್ಲ, ನಮಗೂ ಎಲ್ಲಾ ರೀತಿ ಭಾಷೆಯಲ್ಲೂ ಮಾತನಾಡಲು ಗೊತ್ತಿದೆ. ಉನ್ನತ ಸ್ಥಾನದಲ್ಲಿದ್ದಾರೆ. ಜನ ಅದನ್ನು ಗೌರವಿಸುತ್ತಾರೆ. ಕುಮಾರಸ್ವಾಮಿ ಅದನ್ನು ಉಳಿಸಿಕೊಳ್ಳಲಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

RELATED ARTICLES

Latest News