Wednesday, January 8, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಕಾಯುವವರೇ ಕಳ್ಳರು : ಆನೆ ಕೊಂದು ದಂತ ಅಪಹರಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್

ಕಾಯುವವರೇ ಕಳ್ಳರು : ಆನೆ ಕೊಂದು ದಂತ ಅಪಹರಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್

wist in the case of killing an elephant and stealing its tusks

ಚಿಕ್ಕಮಗಳೂರು,ಜ.7- ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶ ಬೈರಾಪುರ ಸರ್ವೇ ನಂಬರ್‌ 37ರಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಮಾಡಿದ್ದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

ಪ್ರಕರಣದಲ್ಲಿ ಅಲ್ಲಿನ ಸಿಬ್ಬಂದಿ ಭಾಗಿ ಆಗಿರುವ ಬಗ್ಗೆ ತನಿಖೆಯಿಂದ ಖಚಿತವಾದ ಹಿನ್ನೆಲೆಯಲ್ಲಿ ಫಾರೆಸ್ಟ್‌ಗಾರ್ಡ್‌ ದೇವರಾಜ್‌ ಹಾಗೂ ಉಪವಲಯ ಅರಣ್ಯಾಧಿಕಾರಿ ಕುಮಾರ್‌ನಾಯಕ್‌ ಅವರನ್ನು ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

ಆನೆ ಹತ್ಯೆ ಹಲವು ಸಂಶಯಗಳಿಗೆ ಕಾರಣವಾಗಿದ್ದು, ಜೂನ್‌ 2024ರಲ್ಲೇ ಆನೆಯ ಕಳೆಬರ ಅಲ್ಲಿನ ಬೀಟ್‌ ಸಿಬ್ಬಂದಿಗೆ ಸಿಕ್ಕಿದೆ. ಆಗ ಅದರಲ್ಲಿ ದಂತ ಇರುವುದು ಕಂಡುಬಂದಿದೆ. ಇದನ್ನು ಮೇಲಾಧಿಕಾರಿಗಳಿಗೆ ತಿಳಿಸದೆ ದಂತ ಕಳವು ಮಾಡಿರುವ ಸಾಧ್ಯತೆ ಇರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಆನೆ ಕಳೆಬರದ ಮರಣೋತ್ತರ ಪರೀಕ್ಷೆ ಕಾಟಾಚಾರಕ್ಕೆ ಮಾಡಿಸಿ ಹೆಣ್ಣಾನೆ ಎಂದು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ಮಾಡಲಾಗಿದೆ ಎಂಬ ಆರೋಪವಿದೆ.

ಇದರಲ್ಲಿ ಸರ್ಕಾರೇತರ ಸಂಸ್ಥೆಯ ಸದಸ್ಯರೊಬ್ಬರು ಭಾಗಿಯಾಗಿದ್ದು ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರಿ ಪಶುವೈದ್ಯರು ಬಾರದೆ ಇಲಾಖೆಯ ಗುತ್ತಿಗೆ ವೈದ್ಯರೇ ಮರಣೋತ್ತರ ಪರೀಕ್ಷೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಮಾಧ್ಯಮ ವರದಿ, ಸಾಮಾಜಿಕ ಪರಿಸರ ಕಾರ್ಯಕರ್ತರು ದೂರು ನೀಡಿದ ಮೇಲೆ ಅರಣ್ಯ ಸಚಿವರು ತನಿಖೆ ಮಾಡುವಂತೆ ಆದೇಶ ಮಾಡಿದ್ದರು.ಇಲಾಖೆ ಹಿರಿಯ ಅಧಿಕಾರಿಗಳು ತನಿಖೆ ಮಾಡಿ ಆನೆ ಕೊಂದು ದಂತ ನಾಪತ್ತೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ . ಅಧೀನ ಸಿಬ್ಬಂದಿಯನ್ನು ಅಮಾನತು ಮಾಡಿ ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಯತ್ನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಭದ್ರಾ ಅಭಯಾರಣ್ಯದ ಮತ್ತೊಡಿ ವಲಯದಲ್ಲಿ 2004ರಲ್ಲಿ ಇದೇ ರೀತಿ ಗುಂಡು ಹೊಡೆದು ಆನೆ ಹತ್ಯೆ ಮಾಡಿ ದಂತ ಅಪಹರಣ ಮಾಡಲಾಗಿತ್ತು. ಕಳ್ಳರನ್ನು ಹಿಡಿದು ದಂತ ವಶಪಡಿಸಿಕೊಳ್ಳಲಾಗಿತ್ತು.

ಸಿಐಡಿ ತನಿಖೆಗೆ ಒತ್ತಾಯ: ಹಿರಿಯ ಅಧಿಕಾರಿಗಳ ತಲೆ ದಂಡವಾಗಬೇಕು, ಆರೋಪಿಗಳನ್ನು ಪತ್ತೆಹಚ್ಚಿ, ಆನೆ ದಂತಗಳನ್ನು ತಕ್ಷಣ ಪತ್ತೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಪ್ರಕರಣದಲ್ಲಿ ಯಾರು ಎಷ್ಟೇ ಪ್ರಭಾವಿಗಳಾಗಿದ್ದರೂ ರಕ್ಷಿಸದೆ ತನಿಖೆಯಾಗಬೇಕು ಎಂದು ದೂರುದಾರ ಸಾಮಾಜಿಕ ಪರಿಸರ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಬೇಕು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಿಗೆ ಅವರು ಮನವಿ ಮಾಡಿದ್ದಾರೆ.

RELATED ARTICLES

Latest News