ಬೆಂಗಳೂರು, ನ.8 – ಪೈಂಟ್ ಮಿಕ್ಸ್ ಮಾಡುವ ಗ್ರೈಂಡರ್‌ಗೆ ಮಹಿಳೆಯ ಕೂದಲು ಸಿಕ್ಕಿಕೊಂಡ ಪರಿಣಾಮ ತಲೆ ತುಂಡಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ರಾಮನಗರ ಮೂಲದ ಶ್ವೇತಾ (33) ಮೃತಪಟ್ಟಿರುವ ಮಹಿಳೆ. ಇವರು ನಗರದ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ನೆಲಗದರನಹಳ್ಳಿಯಲ್ಲಿ ಶ್ರೀ ಪೈಂಟ್ಸ್ ಎಂಬ ಸಣ್ಣ ಪೈಂಟಿಂಗ್ಸ್ ಕಾರ್ಖಾನೆ ಇದೆ. ಈ ಕಾರ್ಖಾನೆಯಲ್ಲಿ ಮೂರ್ನಾಲ್ಕು ಮಂದಿ ಕೆಲಸ ಮಾಡುತ್ತಿದ್ದಾರೆ.
ನಿನ್ನೆ ಎಂದಿನಂತೆ ಶ್ವೇತಾ ಅವರು ಪೈಂಟ್ ಕಾರ್ಖಾನೆಗೆ ಕೆಲಸಕ್ಕೆ ಬಂದಿದ್ದಾರೆ. ನಿನ್ನೆ ಸಂಜೆ 4 ಗಂಟೆ ಸುಮಾರಿನಲ್ಲಿ ಪೈಂಟ್ ಮಿಕ್ಸಿಂಗ್ ಗ್ರೈಂಡರ್ ಹಾಕಲಾಗಿತ್ತು. ಆ ವೇಳೆ ಗ್ರೈಂಡರ್ ಸ್ವಿಚ್ ಆಫ್ ಮಾಡಿ ಪೈಂಟ್ ತೆಗೆದುಕೊಳ್ಳುವ ಬದಲು ಹಾಗೆಯೇ ಬಗ್ಗಿಕೊಂಡು ಪೈಂಟ್ ತೆಗೆಯುತ್ತಿದ್ದಾಗ ಕೂದಲು ಜಾರಿ ಗ್ರೈಂಡರ್‌ಗೆ ಸುತ್ತಿಕೊಂಡಿದೆ.
ಬೆಂಗಳೂರಿಗೆ 24 ಟಿಎಂಸಿ ನೀರು ಮೀಸಲಿಡಲು ಸರ್ಕಾರ ಆದೇಶ : ಡಿಸಿಎಂ
ಆಗ ಸಹಾಯಕ್ಕಾಗಿ ಕೂಗಿಕೊಂಡರಾದರೂ ಯಾರಿಗೂ ಕೇಳಿಸಿಲ್ಲ. ಪರಿಣಾಮ ಗ್ರೈಂಡರ್ ಸುತ್ತುತ್ತಾ ಆಕೆಯ ಕತ್ತು ತುಂಡರಿಸಿದ್ದು. ದಾರುಣವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ನೋಡಿ ಸಹಕಾರ್ಮಿಕರು ಮಾಲೀಕರು ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಕಾರ್ಖಾನೆ ಮಾಲೀಕರ ವಿರುದ್ಧ ನಿರ್ಲಕ್ಷ್ಯತೆ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.