ನವದೆಹಲಿ,ಜ.2- ವೈಎಸ್‍ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕ ಅಧ್ಯಕ್ಷೆ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಈ ವಾರ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ, ರಾಜ್ಯದಲ್ಲಿ ಭಾರತ್ ರಾಷ್ಟ್ರ ಸಮಿತಿ ಪ್ರಾಬಲ್ಯವನ್ನು ಕೊನೆಗೊಳಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯಾಗಿದೆ.
ಲೋಕಸಭೆ ಚುನಾವಣೆಯ ಜೊತೆಗೆ ಈ ವರ್ಷ ಆಂಧ್ರದಲ್ಲೂ ಚುನಾವಣೆ ನಡೆಯಲಿದ್ದು, ಅಲ್ಲಿ ಕಾಂಗ್ರೆಸ್ ನಾಯಕತ್ವವು ಶರ್ಮಿಳಾ ಅವರಿಗೆ ಪ್ರಮುಖ ಪಾತ್ರವನ್ನು ನೀಡಲಿದೆ ಎಂದು ಭಾವಿಸಲಾಗಿದೆ.
ಈ ಕ್ರಮವು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಪ್ರಮುಖ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಪ್ರಭಾವವನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿರುವ ಸಮಯದಲ್ಲಿ ವೈಎಸ್‍ಆರ್‍ಸಿಪಿಯನ್ನು ತೊರೆಯಲು ಸಿದ್ಧರಿರುವವರು ಈಗ ಕಾಂಗ್ರೆಸ್‍ಗೆ ಸೇರಬಹುದು ಎಂದು ಪಕ್ಷವು ಕರೆ ನೀಡಿದೆ.
ದಕ್ಷಿಣ ಕೊರಿಯಾ ಪ್ರತಿಪಕ್ಷ ನಾಯಕ ಲೀ ಮೇಲೆ ದಾಳಿ
2021ರಿಂದ ಶರ್ಮಿಳಾ ಅವರು ತಮ್ಮ ಸಹೋದರನೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದ್ದು, ತೆಲಂಗಾಣದಲ್ಲಿ ವೈಎಸ್‍ಆರ್‍ಸಿಪಿಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಟೀಕಿಸಿದ್ದರು ಮಾತ್ರವಲ್ಲ, ಅದೇ ವರ್ಷ ಜುಲೈನಲ್ಲಿ ವೈಎಸ್‍ಆರ್ ತೆಲಂಗಾಣ ಪಕ್ಷದ ರಚನೆಯನ್ನು ಘೋಷಿಸಿದರು ಮತ್ತು ಹಿಂದಿನ ಕೆ ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಪ್ರಚಾರವನ್ನು ಪ್ರಾರಂಭಿಸಿದ್ದರು.
ಈ ವರ್ಷದ ಆರಂಭದಲ್ಲಿ ಶರ್ಮಿಳಾ ಅವರು ತೆಲಂಗಾಣ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಘೋಷಿಸಿದ್ದರು.ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಸುಸಜ್ಜಿತವಾಗಿದ್ದು, ಅದನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದರು.