ಬಿಜಾಪುರ,ಜ.19– ಯಾವುದೇ ಕಾರಣಕ್ಕೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಗುಡುಗಿರುವ ಭಿನ್ನಮತೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದವರನ್ನು ನಾವು ಒಪ್ಪಿಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ವಿಚಾರ ಬಂದಾಗ ನಾನು ಯಾವಾಗಲೂ ಪಕ್ಷ ನಿಷ್ಠೆಯಾಗಿ ರುತ್ತೇನೆ. ಆದರೆ ನಾಯಕತ್ವ ವಿಚಾರ ಬಂದಾಗ ವಿಜಯೇಂದ್ರ ಅವರನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಮೊದಲು ಅವರು ತಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರ ಬಗ್ಗೆ ಮಾತನಾಡಲಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ವಿಜಯೇಂದ್ರ ಮೊದಲು ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು. ಯಾವುದೇ ಕಾರಣಕ್ಕೂ ಅವರ ನಾಯಕತ್ವವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಮ ನಿಲುವನ್ನು ನಾವು ಈಗಾಗಲೇ ವರಿಷ್ಠರ ಬಳಿ ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ನಕಲಿ ಸಹಿಗಳನ್ನು ಹಾಕುತ್ತಿದುದ್ದೇ ವಿಜಯೇಂದ್ರ. ಹೀಗಾಗಿಯೇ ಯಡಿಯೂರಪ್ಪರು ಜೈಲಿಗೆ ಹೋಗಬೇಕಾಯಿತು. ಇಂಥ ಗುಣಗಳನ್ನು ಹೊಂದಿರುವ ವಿಜಯೇಂದ್ರನನ್ನು ನಾವು ಅಧ್ಯಕ್ಷ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಯಡಿಯೂರಪ್ಪನವರಿಗೆ ಅವರ ಮನೆಯಲ್ಲೇ ಕಿಮತ್ತಿಲ್ಲ, ವಿಜಯೇಂದ್ರ ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ. ಯಡಿಯೂರಪ್ಪ ಮೊದಲು ಮಗನ ವ್ಯಾಮೋಹ ಬಿಡಲಿ. ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಮಾಜಿ ರಾಜ್ಯಾಧ್ಯಕ್ಷ ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಅನ್ಯಾಯ ಮಾಡಿದ್ದಾರೆ. ತಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದಾರೆ. ಸುಮನೇ ಮೊಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ವಾಗ್ದಾಳಿ ನಡೆಸಿದರು.
ನಮ ವಿರುದ್ಧ ಎರಡು ಹಂದಿಗಳು ಬಿಟ್ಟರೆ ಬೇರೆ ಯಾರೂ ಮಾತನಾಡುವುದಿಲ್ಲ. ಆ ಹಂದಿಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ವಿಜಯೇಂದ್ರ ಪರ ಹೊಗಳು ಭಟರು ಮಾತ್ರ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ. ಅವನನ್ನು ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು. ಇವನಿಂದಲೇ ಸುನೀಲ್ಕುಮಾರ್ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಕೋರಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ನಾವು ಉತ್ತರ ಕರ್ನಾಟಕದ ಜನರು ಹೀಗೇ, ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾಗ ಕೂಡ ನಾನು ಒಬ್ಬನೆ ಹೋಗಿದ್ದೆ. ನಾವು ಯಾರಿಗೂ ಹೆದರುವುದಿಲ್ಲ ಎಂದು ಕಿಡಿಕಾರಿದರು.