ಬೆಳಗಾವಿ,ಡಿ.18– ರಾಜಕೀಯ ದ್ವೇಷಕ್ಕಾಗಿ ರೈತರಿಗೆ ತೊಂದರೆ ಕೊಡಬೇಡಿ. ಚಿಂಚೋಳಿ ತಾಲೂಕಿನಲ್ಲಿ ಆರಂಭಿಸಲಾದ ಕಬ್ಬು ಕಾರ್ಖಾನೆಗೆ ಮಾಲಿನ್ಯದ ನೆಪ ಹೇಳಿ ತಡೆಯೊಡ್ಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಆರೋಪ ವಿಧಾನಸಭೆ ಕಲಾಪದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು.
ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, 374 ಹಳ್ಳಿಗಳಲ್ಲಿ ಬೆಳೆದಿರುವ 20 ಲಕ್ಷ ಟನ್ ಕಬ್ಬನ್ನು ಏಕಕಾಲಕ್ಕೆ ಅರೆಯಲು ಸಾಧ್ಯವಿಲ್ಲ. ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ ಕಬ್ಬಿಗೆ ಈವರೆಗೂ ದರ ನಿಗದಿಯಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಆಕ್ಷೇಪಣೆ ನೆಪದಲ್ಲಿ ಕಬ್ಬು ಅರೆಯಲು ಅವಕಾಶ ನೀಡದೇ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ. ಪ್ರಭಾವಿ ಸಚಿವರುಗಳಾದ ಪ್ರಿಯಾಂಕ ಖರ್ಗೆ, ಶರಣಪ್ರಕಾಶ ಪಾಟೀಲರು ರೈತರ ನೆರವಿಗೆ ಧಾವಿಸಿದ್ದಾರೆ. ನನ್ನ ಮೇಲಿನ ರಾಜಕೀಯ ದ್ವೇಷಕ್ಕಾಗಿ ಕಾರ್ಖಾನೆಗೆ ತೊಂದರೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಶರಣಪ್ರಕಾಶ ಪಾಟೀಲ್, ಈ ರೀತಿಯ ಆರೋಪಗಳು ಸರಿಯಲ್ಲ. ನಾವು ರೈತರ ಪರವಾಗಿದ್ದೇವೆ ಎಂದರು.ಸಚಿವ ಪ್ರಿಯಾಂಕ ಖರ್ಗೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಯಾವ ಕಾರಣಕ್ಕೆ ಯಾರ ಮೇಲೆ ಆಕ್ಷೇಪಗಳಿವೆ ಎಂಬುದನ್ನು ಸದಸ್ಯರು ವಿವರವಾಗಿ ಮಾತನಾಡಬೇಕು. ಅನುಮಾನ ಬರುವ ರೀತಿಯಲ್ಲಿ ಹೇಳಿಕೆ ನೀಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಅರವಿಂದ ಬೆಲ್ಲದ್ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಯತ್ನಾಳ್ ಅವರ ಬೆಂಬಲಕ್ಕೆ ನಿಂತರು.ಮಾಲಿನ್ಯದ ಬಗ್ಗೆ ಸರ್ಕಾರ ದ್ವಂದ್ವನೀತಿಯನ್ನು ಅನುಸರಿಸುತ್ತಿದೆ ಎಂದು ಅಶ್ವತ್ಥನಾರಾಯಣ ಆರೋಪಿಸಿದಾಗ, ಸಚಿವ ಪ್ರಿಯಾಂಕ ಖರ್ಗೆ ವಾಗ್ವಾದಕ್ಕೆ ಇಳಿದರು. ಇದು ಕೆಲಕಾಲ ಕಾವೇರಿದ ಚರ್ಚೆಗೆ ಕಾರಣವಾಯಿತು.
ಸಚಿವ ಶರಪ್ರಕಾಶ ಪಾಟೀಲ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಗಿ ಪಡೆದಿಲ್ಲ ಎಂದು ಆಕ್ಷೇಪಗಳಿವೆ. ನಾನು ಪರಿಶೀಲಿಸಿದಾಗ ಈ ಅಂಶ ಕಂಡುಬಂದಿದೆ. ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಯತ್ನಾಳ್ ಅವರು ಕಾರ್ಖಾನೆ ನಡೆಸಲು ರಾಜ್ಯಸರ್ಕಾರದಿಂದ ಯಾವುದೇ ತಕರಾರಿಲ್ಲ. ನಾವು ಸ್ವಾಗತಿಸುತ್ತೇವೆ ಎಂದರು.
ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ. ಅದರ ಆಧಾರದ ಮೇಲೆ ದ್ವಿಸದಸ್ಯ ಪೀಠ ಆದೇಶ ನೀಡಿ ಕಾರ್ಖಾನೆ ಪುನರಾರಂಭಕ್ಕೆ ಸೂಚಿಸಿದೆ ಎಂದು ಯತ್ನಾಳ್ ಹೇಳಿದರು.ನಿಷೇಧ ಹೇರಿದ್ದು ರಾಜ್ಯಸರ್ಕಾರವಲ್ಲ, ಕೇಂದ್ರ ಸರ್ಕಾರ. ಅಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದರೆ ನಾವು ವಿರೋಧಿಸುವುದಿಲ್ಲ ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು.
ಈ ವಿಚಾರವಾಗಿ ಸಚಿವರಿಗೆ ಹೆಚ್ಚಿನ ಮಾಹಿತಿ ಇಲ್ಲ. ರಾಜಕೀಯ ಕಾರಣಕ್ಕಾಗಿ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೈಕೋರ್ಟ್ ಆದೇಶ ನೀಡಿದ ಮೇಲೆ ಯಾವ ಪ್ರಕರಣದಲ್ಲೂ ಮೇಲನವಿ ಸಲ್ಲಿಸಿಲ್ಲ. ಆದರೆ ನಮ ಪ್ರಕರಣದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂಕೋರ್ಟ್ ಮೇಲನವಿ ಸಲ್ಲಿಸಿದೆ ಎಂದು ಯತ್ನಾಳ್ ಆಕ್ಷೇಪಿಸಿದರು.
ಕಾರ್ಖಾನೆಯಿಂದ ರೈತರಿಗೆ ಅನುಕೂಲವಾಗುತ್ತಿತ್ತು. ನನ್ನ ಮೇಲಿನ ರಾಜಕೀಯ ದ್ವೇಷಕ್ಕೆ ಪ್ರತಿದಿನ ಕೇಂದ್ರಕ್ಕೆ ಹೋಗಿ ಯತ್ನಾಳ್ ವಿಚಾರ ಏನಾಯಿತು ಎಂದು ವಿಚಾರಿಸಿ ತೊಂದರೆ ಕೊಡುತ್ತಿದ್ದಾರೆ. ಅದು ಯಾರು ಎಂದು ಚೆನ್ನಾಗಿ ಗೊತ್ತಿದೆ. ಈ ವಿಷಯದಲ್ಲಿ ನಾನು ರಾಜ್ಯಸರ್ಕಾರದ ಸಚಿವರುಗಳ ಮೇಲೆ ಆರೋಪ ಮಾಡುವುದಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಲುಲ್ಲೂ ಮಾಲ್ಗೆ ಹಸಿರು ಕಾರ್ಪೆಟ್ ಹಾಕಿ ಕಾಂಪ್ಲೆಕ್ಸ್ ಕಟ್ಟಿಕೊಟ್ಟಿದ್ದಾರೆ. ಚಿಂಚೋಳಿಯಲ್ಲಿ ಸಿಮೆಂಟ್ ಕಾರ್ಖಾನೆಗಳು ಭಾರಿ ಮಾಲಿನ್ಯ ಮಾಡುತ್ತಿವೆ. ಇದ್ಯಾವುದಕ್ಕೂ ತಕರಾರುಗಳಿಲ್ಲ. ನನ್ನ ಕಾರ್ಖಾನೆ ವಿಚಾರದಲ್ಲಿ ಮಾತ್ರ ಅಡ್ಡಿಪಡಿಸಲಾಗುತ್ತಿದೆ ಎಂದು ದೂರಿದರು. ಕೆಲಕಾಲ ಇದು ವಾದವಿವಾದಕ್ಕೂ ಕಾರಣವಾಯಿತು.