Friday, November 22, 2024
Homeಅಂತಾರಾಷ್ಟ್ರೀಯ | International40 ಬ್ಯಾಂಕ್ ದಿವಾಳಿ, ಆರ್ಥಿಕ ಸಂಕಷ್ಟದಲ್ಲಿ ಚೀನಾ

40 ಬ್ಯಾಂಕ್ ದಿವಾಳಿ, ಆರ್ಥಿಕ ಸಂಕಷ್ಟದಲ್ಲಿ ಚೀನಾ

ಬೀಜಿಂಗ್‌,ಜು.25- ಚೀನಾದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಭಾರೀ ಬಿರುಕು ಮೂಡಿದ್ದು, ಸುಮಾರು 40 ಬ್ಯಾಂಕ್‌ಗಳು ಮುಳುಗುವ ಸ್ಥಿತಿಗೆ ತಲುಪಿವೆ.ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಹೆಚ್ಚಿನ ಸಾಲ ನೀಡಿಕೆ ಹಾಗೂ ಇತರೆ ಕಾರಣದಿಂದಾಗಿ ದೇಶದಲ್ಲಿ 3800 ಬ್ಯಾಂಕ್‌ಗಳು ಸಮಸ್ಯೆಯ ಸುಳಿಗೆ ಸಿಲುಕಿವೆ ಎಂದು ವರದಿಯಾಗಿದೆ.

ಡ್ರಾಗನ್‌ ರಾಷ್ಟ್ರದಲ್ಲಿ ಬ್ಯಾಂಕ್‌ಗಳ ದಿವಾಳಿತನ ಮುಂದುವರೆದಿದ್ದು, ವಿಶ್ವ ವ್ಯಾಪಿ ಇದು ಭಾರೀ ಸಂಚಲನ ಮೂಡಿಸಿದೆ. ಚೀನಾದ ಜಿಯಾಂಗ್ಸಿ ಬ್ಯಾಂಕ್‌ ದಿವಾಳಿ ಎದಿದ್ದು, ಠೇವಣಿದಾರರು ಹಣ ವಾಪಸ್ಸಿಗೆ ಬ್ಯಾಂಕ್‌ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಮಸ್ಯೆಗೆ ಸಿಲುಕಿರುವ 3800 ಹಣಕಾಸು ಸಂಸ್ಥೆಗಳು ಒಟ್ಟಾರೆ 7.5 ಲಕ್ಷ ಕೋಟಿ ಡಾಲರ್‌ಗಳಷ್ಟು ಆಸ್ತಿ ಹೊಂದಿವೆ. ಇವು ದೇಶದ ಒಟ್ಟಾರೆ ಬ್ಯಾಂಕ್‌ ವಲಯದ ಆಸ್ತಿಯ ಶೇ.13ರಷ್ಟಿದೆ. ಈ ಬ್ಯಾಂಕ್‌ಗಳಿಂದ ನೀಡಲಾದ ಸಾಲಗಳ ಪೈಕಿ ಶೇ.40ರಷ್ಟು ವಸೂಲಾಗದಿರುವುದೇ ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ.

2023ರ ಅಂತ್ಯದ ವೇಳೆಗೆ 27 ಸ್ಥಳೀಯ ಬ್ಯಾಂಕ್‌ಗಳ ಕುರಿತ ಸಂಶೋಧನೆ ಆಧರಿಸಿ ಹೇಳುವುದಾದರೆ 2022ಕ್ಕೆ ಹೋಲಿಸಿದ್ದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಸಾಲ ನೀಡಿಕೆ ಶೇ.30ರಷ್ಟು ಹೆಚ್ಚಾಗಿದೆ ಎಂದು ದಿ ಲಿಬರ್ಟಿ ಟೈಮ್ಸೌ ತಿಳಿಸಿದೆ. 2021ರಲ್ಲಿ ಎವರ್‌ ಗ್ರಾಂಡೆ, ಕಂಟ್ರಿ ಗಾರ್ಡನ್‌, ಸಿನೊ ಓಷನ್‌ ಗ್ರೂಪ್‌, ಎಸ್‌‍ಒಎಚ್‌ಒ ಚೀನಾದಂತಹ ರಿಯಲ್‌ ಎಸ್ಟೇಟ್‌ ಕಂಪನಿಗಳು ಪತನ ಹೊಂದಿದ ಬಳಿಕ ಚೀನಿ ಬ್ಯಾಂಕ್‌ಗಳು ತೀವ್ರ ಒತ್ತಡಕ್ಕೆ ಸಿಲುಕಿವೆ.

ಸರ್ಕಾರ ವಿಧಿಸಿರುವ ಕಠಿಣ ಕರೆನ್ಸಿ ನಿಯಂತ್ರಣದಿಂದಾಗಿ ಚೀನಾದ ಬ್ಯಾಂಕ್‌ ಬಿಕ್ಕಟ್ಟಿನಿಂದ ಹೊರಬಂದು ಲಾಭ ಗಳಿಸುವುದು ಅಸಾಧ್ಯದ ಮಾತಾಗಿದೆ ಎಂದು ತೈವಾನ್‌ನ ನಿಧಿ ಹೂಡಿಕೆದಾರರೊಬ್ಬರು ಏಷ್ಯ ಸೆಂಟಿನಲ್‌ಗೆ ತಿಳಿಸಿದ್ದಾರೆ. ಸುಮಾರು 3 ಸಾವಿರ ಚೀನಿ ಬ್ಯಾಂಕ್‌ಗಳು ತಾಂತ್ರಿಕವಾಗಿ ದಿವಾಳಿ ಎದ್ದಿವೆ ಎಂದು ಲಿಬರ್ಟಿ ಟೈಮ್ಸೌ ವರದಿ ಮಾಡಿದೆ.

ಈ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಸಣ್ಣ ಬ್ಯಾಂಕ್‌ಗಳು ಉಳಿತಾಯ ಮತ್ತು ಸಾಲ ನೀಡಿಕೆಯಲ್ಲಿ ತೊಂದರೆಯನ್ನು ಎದುರಿಸುತ್ತಿವೆ. 2019ರ ಈಚೆಗೆ ಕೆಲವು ಚೀನಿ ಬ್ಯಾಂಕ್‌ಗಳು ಮುಳುಗಿ ಹೋಗಿದ್ದು, ಸಣ್ಣ ಕೃಷಿ ಬ್ಯಾಂಕ್‌ಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರಿಯಲ್‌ ಎಸ್ಟೇಟ್‌ ಬಿಕ್ಕಟ್ಟನ್ನು ಎದುರಿಸಲು ಚೀನಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ವಸತಿ ಮಾರುಕಟ್ಟೆ ಆರಂಭಿಸಲು ಚಿಂತನೆ ನಡೆಸಿದೆ.

ಮೊದಲ ಖರೀದಿದಾರರಿಗೆ ಡೌನ್‌ ಪೇಮೆಂಟ್‌ ಕಂತುಗಳ ಮೊತ್ತವನ್ನು ಕಡಿಮೆ ಮಾಡಲಾಗಿದೆ. ಅಡಮಾನ ಇಡುವ ಆಸ್ತಿಗಳ ಮೇಲಿನ ಬಡ್ಡಿಯ ದರವನ್ನು ತಗ್ಗಿಸಲಾಗಿದೆ. ಈ ಎಲ್ಲ ಕ್ರಮಗಳ ನಡುವೆಯೂ ಸುಮಾರು 5 ಲಕ್ಷದ 432 ಕೋಟಿ ಭಾರತೀಯ ರೂಪಾಯಿಗಳಷ್ಟು ಸಾಲ ಬೆಂಬಲ ಈ ವರ್ಷದ ಮಾರ್ಚ್‌ ವೇಳೆಗೆ ತೊಂದರೆಗೆ ಸಿಲುಕಿದೆ.

ಇದರ ಜೊತೆಗೆ ಉನ್ನತ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ದಿವಾಳಿತನದಿಂದಾಗಿ ಸಾರ್ವಜನಿಕರು ಬ್ಯಾಂಕ್‌ಗಳ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದು ವಿವಿಧ ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಿ ಹೋಗಲು ಎಡೆ ಮಾಡಿಕೊಡುತ್ತಿದೆ.

ಏತನಧ್ಯೆ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಚೀನಿ ಸರ್ಕಾರ ನಿರ್ಧರಿಸಿರುವುದರಿಂದ ಸಾರ್ವಜ ನಿಕರು ಬ್ಯಾಂಕ್‌ಗಳ ಮೇಲೆ ಇನ್ನಷ್ಟು ಅಪನಂಬಿಕೆ ತಳೆಯಲು ಆಸ್ಪದವಾಗಿದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.
ಚೀನಾ ವಿಶ್ವದಲ್ಲೇ 2ನೇ ಆರ್ಥಿಕ ದೇಶವಾಗಿದ್ದು, ಇದರ ಬ್ಯಾಂಕಿಂಗ್‌ ವ್ಯವಸ್ಥೆ ದುಸ್ಥಿತಿಗೆ ತಲುಪಿರುವುದು ಜಾಗತಿಕ ಹಣಕಾಸು ವ್ಯವಸ್ಥೆ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಇತರೆ ದೇಶದ ಬ್ಯಾಂಕ್‌ಗಳು ಎಚ್ಚೆತುಕೊಂಡಿವೆ.

ಉತ್ಪದನಾ ವಲಯದಲ್ಲಿ ಅಗ್ರಮಾನ್ಯವಾಗಿರುವ ಚೀನಾದ ಮೇಲೆ ಎಚ್ಚರಿಕೆಯ ಕಣ್ಣಿಟ್ಟಿರುವ ಫ್ರಾನ್‌್ಸ, ಜಪಾನ್‌, ಇಂಗ್ಲೆಂಡ್‌ ದೇಶಗಳು ಚೀನಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಮತ್ತಷ್ಟು ಎಚ್ಚರಿಕೆ ವಹಿಸುತ್ತಿವೆ.

ಚೀನಾ ಮತ್ತು ಇತರೆ ದೇಶಗಳು ಹಣಕಾಸು ಮಾರುಕಟ್ಟೆಗಳು ಹೆಚ್ಚು ಪರಸ್ಪರ ಸಂಬಂಧ ಹೊಂದಿವೆ, ಚೀನಾದಲ್ಲಿ ಬ್ಯಾಂಕಿಂಗ್‌ ಬಿಕ್ಕಟ್ಟು ಸಾಂಕ್ರಾಮಿಕ ಪರಿಣಾಮವನ್ನು ಉಂಟುಮಾಡಬಹುದು ಪ್ರಪಂಚದ ಇತರ ಭಾಗಗಳಿಗೆ ಅಸ್ಥಿರತೆಯನ್ನು ಹರಡುವ ಸಾಧ್ಯತೆ ಇದೆ.

ಏತನಧ್ಯೆ ವಿಶ್ವದ ಆರ್ಥಿಕ ದೇಶಗಳಲ್ಲಿ 5ನೇ ಸ್ಥಾನದಲ್ಲಿರುವ ಭಾರತ ಮೂರನೇ ಸ್ಥಾನಕ್ಕೆ ಏರುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನುತ್ತಿರುವ ಸಂದರ್ಭದಲ್ಲೇ ಚೀನಾದ ಪ್ರಸ್ತುತ ಬಿಕ್ಕಟ್ಟು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಮುಂದಿನದ ದಿನಗಳಲ್ಲಿ ಗೊತ್ತಾಗಲಿದೆ.

RELATED ARTICLES

Latest News