ಬೆಂಗಳೂರು,ಮಾ.14- ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮಗೆ ಕೊಡಬಾರದ ಸಂಕಷ್ಟಗಳನ್ನು ಕೊಟ್ಟಿದ್ದ ಹಲವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪವರ್ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕೇಂದ್ರ ಬಿಜೆಪಿ ವರಿಷ್ಠರು ಪ್ರಕಟಿಸಿದ 20 ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಕೆಲವು ಹೊರತುಪಡಿಸಿದರೆ, ಬಹುತೇಕ ಆಯ್ಕೆಯಲ್ಲಿ ಯಡಿಯೂರಪ್ಪ ಕೃಪಾಕಟಾಕ್ಷ ಇರುವುದು ಸ್ಪಷ್ಟವಾಗಿ ಗೋಚರಿಸಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಪತನವಾದ ನಂತರ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಯಡಿಯೂರಪ್ಪನವರಿಗೆ ಹಲವಾರು ರೀತಿಯ ಸಂಕಷ್ಟಗಳು ಎದುರಾಗಿದ್ದವು. ಕರ್ನಾಟಕವನ್ನು ಪ್ರತಿನಿಧಿಸುವ ದೆಹಲಿಯ ಪ್ರಭಾವಿ ಸಂಘ ಪರಿವಾರ ಹಿನ್ನೆಲೆಯುಳ್ಳ ಪ್ರಮುಖ ನಾಯಕರೊಬ್ಬರ ಅಣತಿಯಂತೆ ರಾಜ್ಯದ ಬಿಜೆಪಿ ನಾಯಕರು ಬಿ.ಎಸ್.ವೈ ವಿರುದ್ಧ ನಿರಂತರವಾಗಿ ಅಪಮಾನಕರವಾಗುವ ರೀತಿಯಲ್ಲಿ ಮಾತನಾಡುತ್ತಿದ್ದರು.
ಕೊನೆಗೆ ಒಲ್ಲದ ಮನಸ್ಸಿನಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಇನ್ನಿಲ್ಲದ ರೀತಿಯಲ್ಲಿ ಸೋಲಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.ಇದೀಗ ಎಚ್ಚೆತ್ತುಕೊಂಡಿದ್ದ ಕೇಂದ್ರ ಬಿಜೆಪಿ ನಾಯಕರು ಲೋಕಸಭೆ ಚುನಾವಣೆ ವೇಳೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಯಡಿಯೂರಪ್ಪ ಮಾತೇ ಅಂತಿಮ ಎಂಬುದನ್ನು ರಾಜ್ಯ ನಾಯಕರಿಗೆ ರವಾನಿಸಿದ್ದರು. ಇದನ್ನು ಸದ್ಬಳಕೆ ಮಾಡಿಕೊಂಡ ಬಿ.ಎಸ್.ವೈ ತಮ್ಮ ವಿರೋಧಿಗಳಿಗೆ ಟಿಕೆಟ್ ತಪ್ಪಿಸಿ, ತಮ್ಮ ಅತ್ಯಾಪ್ತರಿಗೆ ಟಿಕೆಟ್ ಕೊಡಿಸಿದ್ದಾರೆ.
ಇದು ಬಿಜೆಪಿಯಲ್ಲಿ ಈಗಲೂ ಯಡಿಯೂರಪ್ಪನವರ ಶಕ್ತಿ ಏನೆಂಬುದನ್ನು ರುಜುವಾತುಪಡಿಸಿದೆ ಎನ್ನುತ್ತಾರೆ ಪಕ್ಷದ ಪ್ರಮುಖರು.ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಸಂಸದ, ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಟಿಕೆಟ್ ದೊರೆಯದಂತೆ ಮಾಡುವಲ್ಲಿ ಬಿಎಸ್‍ವೈ ಬಣ ಯಶಸ್ವಿಯಾಗಿದೆ. ಈ ಮೂಲಕ ತಮ್ಮನ್ನು ವಿರೋಧಿಸಿದ್ದವರಿಗೆ ಟಿಕೇಟ್ ಸಿಗದಂತೆ ಮಾಡುವಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ.
ಇಷ್ಟೇ ಅಲ್ಲದೆ, ಪ್ರಭಲ ವಿರೋಧದ ನಡುವೆಯೂ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಕೂಡ ಅವರು ಯಶಸ್ವಿಯಾಗಿದ್ದಾರೆ. ಹಾಗೆಂದು, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಣ ಕೂಡ ಮೇಲುಗೈ ಸಾಧಿಸಿದ್ದರೆ ಇನ್ನು ಕೆಲವು ಕ್ಷೇತ್ರಗಳಿಗೆ ಹೈಕಮಾಂಡ್ ಸ್ವತಃ ಆಯ್ಕೆ ಮಾಡಿದೆ.
ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್‍ಗೆ ಯಡಿಯೂರಪ್ಪ ಮತ್ತು ಪಕ್ಷದ ಬೆಂಬಲವಿರುವುದರಿಂದ 5ನೆ ಬಾರಿ ಟಿಕೆಟ್ ದೊರೆತಿದೆ. ಗಾಯತ್ರಿ ಸಿದ್ದೇಶ್ವರ್ ಕೂಡ ಯಡಿಯೂರಪ್ಪ ಬಣ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಮಹಿಳೆ ಕೋಟದಡಿ ಗಾಯತ್ರಿ ಸಿದ್ದೇಶ್ವರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಸಿದ್ದೇಶ್ವರ ಕುಟುಂಬ ಹೊರತಾಗಿ ಅಭ್ಯರ್ಥಿ ಘೋಷಿಸಿದರೆ ಕ್ಷೇತ್ರ ಕಳೆದುಕೊಳ್ಳುವ ಆತಂಕವೂ ಇಲ್ಲಿ ಬಿಜೆಪಿಗೆ ಎದುರಾಗಿತ್ತು.
ಮತ್ತೊಂದೆಡೆ ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ವ್ಯಕ್ತವಾಗಿದ್ದ ಯಡಿಯೂರಪ್ಪ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹೈಕಮಾಂಡ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಯದುವೀರ ಪರವಾಗಿ ರಾಜ್ಯನಾಯಕರ ಒತ್ತಾಯ ಹೆಚ್ಚಾಗಿತ್ತು.ದಕ್ಷಿಣ ಕನ್ನಡದಲ್ಲಿ ಕಟೀಲ್‍ಗೆ ಯಡಿಯೂರಪ್ಪ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಆಯ್ಕೆ ಮಾಡಲಾಗಿದೆ. ಇವರು ಹೈಕಮಾಂಡ್ ಅಭ್ಯರ್ಥಿ ಎನ್ನಲಾಗಿದೆ.
ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡುವಂತೆ ಬಿ.ಎಲ್.ಸಂತೋಷ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈ ಬಾರಿ ಜೊಲ್ಲೆಗೆ ಟಿಕೆಟ್ ನೀಡಬಾರದೆಂದು ಸಾಕಷ್ಟು ಒತ್ತಡವಿತ್ತು. ರಮೇಶ್ ಕತ್ತಿಗೆ ಟಿಕೆಟ್ ನೀಡವಂತೆ ಯಡಿಯೂರಪ್ಪ ಒತ್ತಡ ಹೇರಿದ್ದರು. ಬಿ.ಎಸ್.ವೈ ಮತ್ತು ರಾಜ್ಯ ನಾಯಕರಿಂದ ರಮೇಶ್ ಕತ್ತಿ ಪರ ಬ್ಯಾಟಿಂಗ್ ನಡೆದಿತ್ತು. ಆದಾಗ್ಯೂ, ಜೊಲ್ಲೆಗೆ ಟಿಕೆಟ್ ಕೊಡುಸುವಲ್ಲಿ ಸಂತೋಷ್‍ಯಶಸ್ವಿಯಾಗಿದ್ದಾರೆ.
ಪಿ.ಸಿ.ಮೋಹನ್ ಆಯ್ಕೆ ನೇರ ಹೈಕಮಾಂಡ್‍ನದ್ದಾಗಿದೆ. ಬಲಿಜ ಸಮುದಾಯಕ್ಕೆ ಅವಕಾಶಕ್ಕಾಗಿ ಪಿಸಿ ಮೋಹನ್‍ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನು ಬಳ್ಳಾರಿಯಿಂದ ಬಿ.ಶ್ರೀರಾಮುಲು ಅವರನ್ನು ಕಣಕ್ಕಿಳಿಸುವುದು ಕೂಡ ಹೈಕಮಾಂಡ್ ತೀರ್ಮಾನ ಎನ್ನಲಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಮಲು ಸ್ಪರ್ಧಯಿಂದ ಬಳ್ಳಾರಿ, ಕೊಪ್ಪಳ, ರಾಯಚೂರು ಕ್ಷೇತ್ರಗಳ ಮೇಲೆ ಪ್ರಭಾವದ ಲೆಕ್ಕಾಚಾರ ಇದರ ಹಿಂದೆ ಇದೆ.
ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಹೈಕಮಾಂಡ್ ಅಭ್ಯರ್ಥಿ. ಹಾವೇರಿ-ಗದಗ ಕ್ಷೇತ್ರದಲ್ಲಿ ಪಕ್ಷ ಗೆಲ್ಲಿಸುವುದಕ್ಕೆ ಹೈಕಮಾಂಡ್ ಈ ಆಯ್ಕೆ ಮಾಡಿದೆ ಎನ್ನಲಾಗಿದೆ. ಬಸವರಾಜ್ ಬೊಮ್ಮಾಯಿಗೆ ನೇರ ಅಮಿತ್ ಶಾ ಬೆಂಬಲವಿತ್ತು ಅಕ್ಕ-ಪಕ್ಕದ ಕ್ಷೇತ್ರಗಳ ಗೆಲುವಿನ ಲೆಕ್ಕಚಾರದಲ್ಲಿ ಬೊಮ್ಮಾಯಿಯನ್ನು ಆಯ್ಕೆ ಮಾಡಲಾಗಿದೆ. ಡಾ.ಬಸವರಾಜ ತ್ಯಾವಟೂರು ಕೂಡ ಹೈಕಮಾಂಡ್ ಆಯ್ಕೆಯಾಗಿದೆ. ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸಂಗಣ್ಣ ಕರಡಿ ಪುತ್ರ ಸೊಸೆಗೆ ಟೆಕೆಟ್ ಪಡೆದಿದ್ದರು. ಬೇರೆಯವರ ಗೆಲುವಿಗೆ ಶ್ರಮಿಸದೆ ಇದ್ದ ಆರೋಪವೂ ಅವರ ಮೇಲಿತ್ತು. ಹಾಗಾಗಿ ಸಂಗಣ್ಣ ಕರಡಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.
ಇನ್ನು ವಿ. ಸೋಮಣ್ಣ ಹೈಕಮಾಂಡ್ ಹಾಗೂ ಬಿ.ಎಲ್.ಸಂತೋಷ ಬಣದ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಕಳೆದ ವಿಧಾನಸಭೆ ಚುನಾವನೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲೇಬೆಕಿದ್ದ ಅನಿವಾರ್ಯತೆ ಹೈಕಮಾಂಡ್ ಮೇಲಿತ್ತು. ಹೀಗಾಗಿ ಯಡಿಯೂರಪ್ಪ ಪ್ರಬಲ ವಿರೋಧದ ನಡೆವೆಯೂ ವಿ. ಸೋಮಣ್ಣಗೆ ಟಿಕೆಟ್ ನೀಡಲಾಗಿದೆ.