ಚನ್ನಪಟ್ಟಣ,ಅ.29- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದು, ಪ್ರಭಾವಿ ನಾಯಕರ್ಯಾರೂ ಜೊತೆಯಲ್ಲಿಲ್ಲದೆ ಏಕಾಂಗಿ ಹೋರಾಟ ನಡೆಸುವಂತಾಗಿದೆ.
ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಕೊನೆಕ್ಷಣದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಸಿ.ಪಿ.ಯೋಗೇಶ್ವರ್ ಹಸ್ತದ ಗುರುತಿನಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಘಟಾನುಘಟಿ ನಾಯಕರು ಸ್ವಾಗತಿಸಿದರು. ಆದರೆ ಚುನಾವಣಾ ಕಣದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುವಂತಾಗಿದೆ.
ಸಂಸದ ಡಿ.ಕೆ.ಸುರೇಶ್ ಚನ್ನಪಟ್ಟಣ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ತಾವೇ ಹೊತ್ತುಕೊಳ್ಳುವುದಾಗಿ ಘೋಷಿಸಿದರು. ಸಚಿವ ಚಲುವರಾಯಸ್ವಾಮಿ ಚುನಾವಣೆಯ ನಿಗಾವಣೆಗೆ ನಿಯೋಜಿತರಾಗಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿ ಇದ್ದರೂ ನಾನೇ ಅಭ್ಯರ್ಥಿ ಇದ್ದಂತೆ. ಕ್ಷೇತ್ರದ ಸೋಲು-ಗೆಲುವು ನನಗೇ ಸಂಬಂಧಪಟ್ಟಿದ್ದು ಎಂದು ಹೇಳುತ್ತಾ ಬಂದಿದ್ದರು.
ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಹೆಗಲು ಕೊಟ್ಟಿದ್ದರು. ಅನಂತರ ಯಾರೂ ಅತ್ತ ತಲೆ ಹಾಕುತ್ತಿಲ್ಲ. ಇಂದು ಬೆಳಿಗ್ಗೆ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಹೊರತುಪಡಿಸಿದರೆ ಅಂತಹ ಪ್ರಮುಖ ನಾಯಕರ್ಯಾರೂ ಸಿ.ಪಿ.ಯೋಗೇಶ್ವರ್ ಜೊತೆ ಕಾಣಿಸಿಕೊಳ್ಳಲಿಲ್ಲ.
ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದ್ದು, ಮುಂದಿನ ದಿನಗಳಲ್ಲಿ ಘಟಾನುಘಟಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕಂತೂ ಯೋಗೇಶ್ವರ್ ಒಬ್ಬಂಟಿಗರಾಗಿ ಜನರ ಮನೆಬಾಗಿಲಿಗೆ ಎಡ ತಾಕುತ್ತಿದ್ದಾರೆ.