Wednesday, May 1, 2024
Homeರಾಜ್ಯತಾ.ಪಂ,ಜಿ.ಪಂ ಮೀಸಲಾತಿ ನಿಗದಿಗೆ ಹೈಕೋರ್ಟ್ ಗಡುವು

ತಾ.ಪಂ,ಜಿ.ಪಂ ಮೀಸಲಾತಿ ನಿಗದಿಗೆ ಹೈಕೋರ್ಟ್ ಗಡುವು

ಬೆಂಗಳೂರು,ನ.9- ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾ ಯಿತಿಗಳ ಚುನಾವಣೆಗಾಗಿ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆಯಾಗಿತ್ತು. ಆದರೆ, ಕೆಲವು ಆಕ್ಷೇಪಣೆಗಳು ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಮರು ನಿಗದಿ (ರೀಡೂ) ಮಾಡಬೇಕಾಗಿದೆ. ಆನಂತರ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಬೇಕಾಗುತ್ತದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಮಯ ಅವಕಾಶ ಬೇಕೆಂದು ಕೋರಿದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಇದನ್ನು ಪೂರ್ಣಗೊಳಿಸಲು ನಾಲ್ಕು ವಾರ ಕಾಲಾವಕಾಶ ನೀಡಬೇಕೆಂದು ಅಡ್ವೇಕೇಟ್ ಜನರಲ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಕೊನೆಯ ಅವಕಾಶವನ್ನು ನೀಡಿತು.

ಇದನ್ನು ಒಪ್ಪದ ನ್ಯಾಯಪೀಠ ಸಂವಿಧಾನ ನಿಯಮದಂತೆ ಚುನಾವಣೆ ನಡೆಸಬೇಕು. ಈಗಾಗಲೇ ಹತ್ತು ವಾರಗಳ ಕಾಲಾವಕಾಶ ನೀಡಲಾಗಿದೆ. ಪುನಃ ಸಮಯವನ್ನು ವಿಸ್ತರಣೆ ಮಾಡಲು ಬರುವುದಿಲ್ಲ. ನಾಲ್ಕು ವಾರಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿಪಡಿಸಿ ಅಂತಿಮಗೊಳಿಸಬೇಕೆಂದು ನಿರ್ದೇಶನ ನೀಡಿ ಮುಂದಿನ ಅರ್ಜಿ ವಿಚಾರಣೆಯನ್ನು ಡಿ.19ಕ್ಕೆ ಮುಂದೂಡಿದೆ.

ರಾಜ್ಯದಲ್ಲಿ ಜಿ.ಪಂ, ತಾ.ಪಂ.ಗಳಿಗೆ 2021ರ ಏಪ್ರಿಲ್ -ಮೇ ತಿಂಗಳಲ್ಲಿ ಅವ ಪೂರ್ಣಗೊಂಡಿತ್ತು. ಮೊದಲು ಕೊರೊನಾ ಕಾರಣಕ್ಕೆ ಚುನಾವಣೆ ಆಗಿರಲಿಲ್ಲ. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಈ ಮಧ್ಯೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ರಾಜ್ಯ ಸರ್ಕಾರ ಹೊಸದಾಗಿ ಸೀಮಾ ನಿರ್ಣಯ ಆಯೋಗ ರಚಿಸಿತು. ಈ ಆಯೋಗವು ಎರಡು ವರ್ಷ ಪ್ರಹಸನ ನಡೆಸಿ ಕೊನೆಗೂ ಈ ವರ್ಷ ಮಾರ್ಚ್‍ನಲ್ಲಿ ಕ್ಷೇತ್ರ ಪುನರ್‍ವಿಂಗಡಣೆ ಅಧಿಸೂಚನೆ ಹೊರಡಿಸಿತು. ಅಷ್ಟರಲ್ಲೇ ವಿಧಾನಸಭೆ ಚುನಾವಣೆ ಘೋಷಣೆ ಆಯಿತು.

ಹಾಗಾಗಿ ಜಿಪಂ, ತಾಪಂ ಚುನಾವಣೆ ನನೆಗುದಿಗೆ ಬಿತ್ತು. ಈ ವಿಚಾರದಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಅನೇಕ ಸಬೂಬುಗಳನ್ನು ಹೇಳುತ್ತಲೇ ಬಂದಿತ್ತು. ಇದಕ್ಕಾಗಿ ಹೈಕೋರ್ಟ್ ಸರ್ಕಾರಕ್ಕೆ ಅನೇಕ ಬಾರಿ ಚಾಟಿ ಬೀಸಿದೆ, ಛೀಮಾರಿ ಹಾಕಿದೆ. 5 ಲಕ್ಷ ರೂ. ದಂಡ ಸಹ ಹಾಕಿತ್ತು.

ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‍ : ಗಂಗೂಲಿ

ಪ್ರಕರಣ ಹೈಕೋರ್ಟ್‍ನಲ್ಲಿ 2023ರ ಮೇ 29ಕ್ಕೆ ವಿಚಾರಣೆಗೆ ಬಂದಿದ್ದಾಗ ಈಗಷ್ಟೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಚಿವರಿಗೆ ಖಾತೆಗಳ ಹಂಚಿಕೆಯಾಗಿದ್ದು, ಜಿಪಂ, ತಾಪಂ ಚುನಾವಣೆಗೆ ಸಂಬಂಧಿಸಿದ ಇಲಾಖೆಯ ಸಚಿವರು ಇನ್ನಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ. ಜಿ.ಪಂ., ತಾ.ಪಂ. ಚುನಾವಣೆ, ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶದಲ್ಲಿನ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಅದನ್ನು ಪಾಲಿಸಲು ಸ್ವಲ್ಪ ಸಮಯ ಬೇಕು. ಅದಕ್ಕಾಗಿ ನಾಲ್ಕು ವಾರ ಕಾಲಾವಕಾಶ ನೀಡಬೇಕೆಂದು ಸರ್ಕಾರ ಹೈಕೋರ್ಟ್‍ಗೆ ಮನವಿ ಮಾಡಿತ್ತು.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಆಯೋಗ ಈ ಪಿಐಎಲ್ ಸಲ್ಲಿಸಿದೆ.

RELATED ARTICLES

Latest News