ಬೆಂಗಳೂರು,ಆ.25- ಆಪರೇಷನ್ ಕಮಲದ ಪ್ರಯತ್ನಗಳು ನಡೆಯುತ್ತಿ ರುವ ಬಗ್ಗೆ ಕಾಂಗ್ರೆಸ್ನ ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ನ ಮಧ್ಯವರ್ತಿಗಳು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ 100 ಕೋಟಿ ರೂ. ಆಮೀಷವೊಡ್ಡುತ್ತಿರುವ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸತ್ಯ ಎಂದರು.
ನಮ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಎಂದ ಮೇಲೆ ಅದರಲ್ಲಿ ವಾಸ್ತಾವಂಶ ಇದೆ ಎಂದು ಶಾಸಕ ಗಣಿಗ ರವಿಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರ ಪ್ರಸ್ತಾಪಿಸಿದರು.
ಬಿಜೆಪಿ ಹಲವು ದಿನಗಳಿಂದಲೂ ಪ್ರಯತ್ನ ಮಾಡುತ್ತಿದೆ. ಈಗಲೂ ಪ್ರಯತ್ನಗಳು ಮುಂದುವರೆಸಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸುವ ಮೂಲಕ ರಾಜ್ಯ ಸರ್ಕಾರವನ್ನು ಪತನಗೊಳಿಸುವ ಉದ್ದೇಶ ಹೊಂದಿದೆ. ನಮ ಯಾವ ಶಾಸಕರು ಇದಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಲೋಪಗಳೇನು ಎಂದು ಯಾರು ಹೇಳುತ್ತಿಲ್ಲ. ಸ್ವಂತ ಜಾಗವನ್ನು ಕಳೆದುಕೊಂಡರೆ 50:50ರ ಅನುಪಾತದಲ್ಲಿ ನಿವೇಶನ ನೀಡುವುದು ಎಲ್ಲ ನಗರಾಭಿವೃದ್ದಿ ಪ್ರಾಧಿಕಾರಗಳಲ್ಲೂ ಚಾಲ್ತಿಯಲ್ಲಿದೆ.
ಕಲಬುರಗಿ ಸೇರಿದಂತೆ ರಾಜ್ಯದ ಹಲವು ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಭೂಮಿ ಕಳೆದುಕೊಂಡವರಿಗೆ ನಿವೇಶನ ನೀಡಿದಂತೆ ಮೈಸೂರಿನಲ್ಲೂ ನೀಡಲಾಗಿದೆ. ಇದನ್ನು ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿ ಹಗರಣ ಎಂಬಂತೆ ಬಿಂಬಿಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರದ ಹಿಂದೆ ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಕೈವಾಡವಿದೆ ಎಂದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 17ರಡಿ ಅನುಮತಿ ನೀಡಬೇಕಾದರೆ ಅನುಸರಿಸಬೇಕಾದ ಕಾರ್ಯ ವಿಧಾನಗಳ ಬಗ್ಗೆ ಕೇಂದ್ರ ಸರ್ಕಾರವೇ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿದೆ. ಅದನ್ನು ಮೀರಿ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಶಾಸಕರ ಖರೀದಿ ಯತ್ನ: ಗಣಿಗ ರವಿಕುಮಾರ್
ಬೆಂಗಳೂರು,ಆ.25- ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸತತ ಪ್ರಯತ್ನ ನಡೆಸುತ್ತಿದ್ದು , ಶಾಸಕರ ಖರೀದಿಗೆ 50 ಕೋಟಿ ರೂ.ಗಳಷ್ಟಿದ್ದ ಮೌಲ್ಯವನ್ನು 100 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಬಿಜೆಪಿಯ ಬ್ರೋಕರ್ ಒಬ್ಬರು ಕರೆ ಮಾಡಿ 100 ಕೋಟಿ ರೂ.ನೀಡುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಪಟ್ಟ ಆಡಿಯೋ ನಮ ಬಳಿ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಈ ಮೊದಲು ಆಪರೇಷನ್ ಕಮಲಕ್ಕೆ 50 ಕೋಟಿ ರೂ. ಹೇಳುತ್ತಿದ್ದರು. ಈಗ 100 ಕೋಟಿಗೆ ಹೆಚ್ಚಿಸಿದ್ದಾರೆ. 50 ಮಂದಿ ಶಾಸಕರು ಯಾರು ಬರುತ್ತೀರೋ ಬನ್ನಿ ಎಂದು ಖರೀದಿಸುವುದಾಗಿ ತಿಳಿಸುತ್ತಿದ್ದಾರೆ. ಇವರ ಬಗ್ಗೆ ಇ.ಡಿ, ಸಿಬಿಐ ಏಕೆ ಗಮನಿಸುತ್ತಿಲ್ಲವೋ ಗೊತ್ತಿಲ್ಲ ಎಂದು ಹೇಳಿದರು.
ಬಿಜೆಪಿಯ ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವುದಾಗಿ ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಷಾ ಅವರಿಗೆ ಭರವಸೆ ನೀಡಿದ್ದಾರೆ. ಅದಕ್ಕಾಗಿ ಹಗಲುರಾತ್ರಿ ಪ್ರಯತ್ನಿಸುತ್ತಿದ್ದಾರೆ. ಆದರೆ 136 ಶಾಸಕರ ಬೆಂಬಲ ಇರುವ ಕಾಂಗ್ರೆಸ್ ಸರ್ಕಾರ ಸದೃಢವಾಗಿದೆ ಎಂದರು.
ಬಿಜೆಪಿಯವರು ಎಷ್ಟೇ ಪ್ರಯತ್ನಪಟ್ಟರೂ ನಮ ಒಬ್ಬ ಶಾಸಕರನ್ನೂ ಖರೀದಿಸಲು ಸಾಧ್ಯವಿಲ್ಲ. ಈ ಮುಂದಿನ ದಿನಗಳಲ್ಲಿ 100 ಕೋಟಿ ಎಂದು ಹೇಳಿಕೊಂಡು ಬೇರೆ ಯಾರಾದರೂ ಬಂದರೆ ಅವರ ವಿಡಿಯೋ ಮಾಡಿಕೊಂಡು ಬಹಿರಂಗ ಮಾಡುತ್ತೇವೆ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಸರ್ಕಾರ ಬಂಡೆಯಂತೆ 5 ವರ್ಷ ಗಟ್ಟಿಯಾಗಿರಲಿದೆ ಎಂದು ಅವರು ಹೇಳಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬಿಜೆಪಿಯ ಏಜೆಂಟರಂತೆ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದ ಅವರು, ಯಾರು ಏನೇ ಪ್ರಯತ್ನ ಮಾಡಿದರೂ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಮಂಡ್ಯ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 13 ಮತಗಳು ಲಭ್ಯವಿದ್ದು, ಬಿಜೆಪಿ-ಜೆಡಿಎಸ್‌ನವರು 20ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿದರು.
ಶಾಸಕ ಗಣಿಗ ರವಿಕುಮಾರ್ ಆಪರೇಷನ್ ಕಮಲದ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದು, ಸರ್ಕಾರವು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಪ್ರತಿಯೊಬ್ಬ ಶಾಸಕರ ಖರೀದಿಗೆ 100 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿರುವುದರಿಂದ ಇದೇ ಸಂದರ್ಭವನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವನ್ನು ಬಿಜೆಪಿ-ಜೆಡಿಎಸ್ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.