Sunday, May 19, 2024
Homeರಾಜ್ಯ5 ತಿಂಗಳಿಂದ ವೇತನ ನೀಡದ ಗ್ಯಾರಂಟಿ ಸರ್ಕಾರ : 108 ಆಂಬ್ಯುಲೆನ್ಸ್ ನೌಕರರ ಮುಷ್ಕರ

5 ತಿಂಗಳಿಂದ ವೇತನ ನೀಡದ ಗ್ಯಾರಂಟಿ ಸರ್ಕಾರ : 108 ಆಂಬ್ಯುಲೆನ್ಸ್ ನೌಕರರ ಮುಷ್ಕರ

ಬೆಂಗಳೂರು,ಮೇ6- ಕಳೆದ ಐದು ತಿಂಗಳಿಂದ ವೇತನ ಸಿಗದ ಮತ್ತು ಸಂಬಳ ಕಡಿತದಂತಹ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ 108 ಆಂಬ್ಯುಲೆನ್ಸ್ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ. ಇದರಿಂದಾಗಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕರ್ನಾಟಕದಾದ್ಯಂತ ಸುಮಾರು 715 ಆಂಬ್ಯುಲೆನ್ಸ್ ಗಳು ಮತ್ತು ಸರಿಸುಮಾರು 3,500 ಉದ್ಯೋಗಿಗಳು 108 ಆಂಬ್ಯುಲೆನ್‌್ಸ ಅಸೋಸಿಯೇಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ತುರ್ತು ಆರೋಗ್ಯ ಸೇವೆಗಳ ಮೇಲೆ ಮುಷ್ಕರ ಪರಿಣಾಮ ಬೀರುವ ಸಾಧ್ಯತೆ ಇದೆ.

ಆಂಬ್ಯುಲೆನ್‌್ಸ ಸೇವೆಯನ್ನು ನಿರ್ವಹಿಸುವ ಜಿವಿಕೆ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ನಡುವಿನ ಅಸಮಾಧಾನದಿಂದ ಈ ಮುಷ್ಕರ ನಡೆಯುತ್ತಿದ್ದು, ಚಾಲಕರು ಮತ್ತು ವೈದ್ಯಕೀಯ ತಂತ್ರಜ್ಞರು ಸೇರಿದಂತೆ ನೌಕರರಿಗೆ ಫೆಬ್ರವರಿ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಮೂರು ತಿಂಗಳ ಸಂಬಳವನ್ನು ಪಾವತಿಸಿಲ್ಲ ಎಂದು 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಚ್ಚುವರಿಯಾಗಿ ಜನವರಿಯಲ್ಲಿ ಸಂಬಳ ಕಡಿತವಾಗಿದೆ. 30,000 ರೂ. ಪಡೆಯುವವರು ಕೇವಲ 12,000 ರೂ.ಸಂಬಳ ಪಡೆದಿದ್ದಾರೆ. ಕಳೆದ ಐದು ತಿಂಗಳಿನಿಂದ ಎರಡು ತಿಂಗಳ ವೇತನಕ್ಕೆ ಸಮನಾದ ವೇತನವನ್ನು ಮಾತ್ರ ಪಡೆದಿದ್ದೇವೆ ಎಂದು ಸಂಘದ ನೌಕರರು ಹೇಳಿದ್ದಾರೆ.

ಸಂಘವು ಬೆಂಗಳೂರಿನಲ್ಲಿ ಸುಮಾರು 90 ಆಂಬ್ಯುಲೆನ್ಸ್ ಗಳನ್ನು ನಿರ್ವಹಿಸುತ್ತಿದ್ದು, 400ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಕರ್ನಾಟಕ ರಾಜ್ಯ ಆರೋಗ್ಯ ವಿಮಾ 108 ನೌಕರರ ಸಂಘವು ಮುಷ್ಕರವನ್ನು ಆಯೋಜಿಸುತ್ತಿದೆ. ತಮ್ಮ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸದಿದ್ದರೆ ಸೇವೆಯನ್ನು ಸ್ಥಗಿತಗೊಳಿಸಲು ಸಿಬ್ಬಂದಿ ಸಿದ್ಧರಿದ್ದಾರೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.

ಇಷ್ಟು ತಿಂಗಳಿನಿಂದ ಕಡಿತಗೊಳಿಸಿರುವ ವೇತನವನ್ನು ಇಂದು ಸಂಜೆಯೊಳಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇಲ್ಲದೆ ಇದ್ದರೇ ಇಂದು ರಾತ್ರಿ 8 ಗಂಟೆಯಿಂದ ಮುಷ್ಕರ ನಡೆಸಲಿದ್ದೇವೆ ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.

ವೇತನ ಬಿಡುಗಡೆ ಮಾಡದೇ ಇದ್ದರೇ, ಇಂದು ರಾತ್ರಿಯಿಂದಲೇ ರಾಜ್ಯದಾದ್ಯಂತ ಒಟ್ಟು 711 ವಾಹನಗಳು 108 ಆಂಬ್ಯುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲಿವೆ. ಈ ಕಠಿಣ ನಿರ್ಧಾರ ಅನೇಕರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ವಿಶೇಷವಾಗಿ ವೈದ್ಯಕೀಯ ಆರೈಕೆಯ ಅಗತ್ಯವಿರುವವರಿಗೆ ತುಂಬಾ ಕಷ್ಟವಾಗಲಿದೆ. ಆಂಬ್ಯುಲೆನ್‌್ಸ ಸೇವೆಯ ಅಲಭ್ಯತೆಯಿಂದ ರೋಗಿಗಳಿಗೆ ಯಾವುದೇ ತೊಂದರೆ ಉಂಟಾದರೆ ಸರ್ಕಾರವೇ ನೇರ ಹೊಣೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.

ನಾವು ಈಗಾಗಲೇ 108 ಸೇವಾ ಪೂರೈಕೆದಾರರಿಗೆ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ಎಸ್ಮಾ) ಸೂಚನೆಯನ್ನು ನೀಡಿದ್ದೇವೆ. ಆದ್ದರಿಂದ ಯಾವುದೇ ಸಮಯದಲ್ಲಿ 108 ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿ ಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News