ಬೆಂಗಳೂರು,ಮಾ.28- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಯುವ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿ ಕೊಂಡಿರುವ ಯುವ ಮತದಾರರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಕಾತರದಿಂದ ಮತದಾನದ ದಿನವನ್ನು ಎದುರು ನೋಡುತ್ತಿದ್ದಾರೆ.
ಇದಕ್ಕೆ ಪೂರಕ ಎಂಬಂತೆ ಚುನಾ ವಣಾ ಆಯೋಗವು ಮತದಾನ ಮಾಡಲು ಯುವ ಮತದಾ ರರನ್ನು ಆಕರ್ಷಿಸಲು ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮತಗಟ್ಟೆಗಳಿಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಹಲವು ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಅಲ್ಲದೆ 18 ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅರ್ಹತಾ ದಿನಾಂಕವನ್ನು ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಎಂದು ನಿಗದಿಪಡಿಸಲಾಗಿದೆ. ಈ ದಿನಾಂಕಗಳಂದು 18 ವರ್ಷ ತುಂಬಿದವರು ಯುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
ಭಾರತ ಚುನಾವಣಾ ಆಯೋಗ ಪ್ರಕಟಿಸಿರುವ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟು 5,47,08,808 ಮತದಾರರು ಇದ್ದು ಈ ಪೈಕಿ 2,71,21,407 ಪುರುಷ, 2,70,81,748 ಮಹಿಳಾ ಮತದಾರರು ಇದ್ದಾರೆ. ಈ ಪೈಕಿ 18-19ನೇ ವಯಸ್ಸಿನ ಯುವ ಹಾಗೂ ಹೊಸ ಮತದಾರರು ಒಟ್ಟು 11,24,622 ಯುವ ಮತದಾರರು ಇದ್ದಾರೆ. ಇವರಲ್ಲಿ 6,05,068 ಪುರುಷ ಹಾಗೂ 5,19,438 ಮಹಿಳಾ ಹಾಗೂ 116 ತೃತೀಯ ಲಿಂಗಿ ಯುವ ಮತದಾರರು ಇದ್ದಾರೆ.
ಕಳೆದ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 18-19 ವರ್ಷದ ಯುವ ಮತದಾರರ ಸಂಖ್ಯೆ 3,88,527ರಷ್ಟು ರಾಜ್ಯದಲ್ಲಿ ಹೆಚ್ಚಳವಾಗಿದೆ. ಇದರಲ್ಲಿ 1,97,046 ಪುರುಷ ಹಾಗೂ 1,9,453 ಮಹಿಳಾ ಹಾಗೂ 28 ಇತರೆ ಮತದಾರರು ಹೆಚ್ಚಾಗಿದ್ದಾರೆ. ಕಳೆದ ಚುನಾವಣೆಯಲ್ಲಿ 10,10,040 ಯುವ ಮತದಾರರು ಇದ್ದರು.
ಕ್ಷೇತ್ರವಾರು ಯುವ ಮತದಾರರ ವಿವರ:
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು 53,077 ಹಾವೇರಿ ಕ್ಷೇತ್ರದಲ್ಲಿ 50658, ಚಿಕ್ಕೋಡಿಯಲ್ಲಿ 50,589 ಹೆಚ್ಚು ಯುವ ಮತದಾರರು ಇದ್ದಾರೆ. ಅತಿಕಡಿಮೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 27461, ಹಾಸನದಲ್ಲಿ 28526 ಯುವ ಮತದಾರರು ಇದ್ದಾರೆ.
ಬೆಳಗಾವಿ-47095, ಬಾಗಲಕೋಟೆ – 47350, ಬಿಜಾಪುರ -39831, ಗುಲ್ಬರ್ಗಾ-36920, ರಾಯಚೂರು-47394, ಬೀದರ್-39145, ಕೊಪ್ಪಳ 46162, ಧಾರವಾಡ -40763, ಉತ್ತರಕನ್ನಡ-37226, ದಾವಣಗೆರೆ-37934, ಶಿವಮೊಗ್ಗ- 34118, ಉಡುಪಿ-ಚಿಕ್ಕಮಗಳೂರು-29909, ದಕ್ಷಿಣ ಕನ್ನಡ-35763, ಚಿತ್ರದುರ್ಗ- 45676, ತುಮಕೂರು-38829, ಮಂಡ್ಯ-37761, ಮೈಸೂರು-41145, ಚಾಮರಾಜನಗರ- 32482, ಬೆಂಗಳೂರು ಗ್ರಾಮಾಂತರ-47356, ಬೆಂಗಳೂರು ಉತ್ತರ-44464, ಬೆಂಗಳೂರು ಕೇಂದ್ರ-30246, ಚಿಕ್ಕಬಳ್ಳಾಪುರ -43138, ಕೋಲಾರ-45603ರಷ್ಟು ಯುವ ಮತದಾರರು ಇದ್ದಾರೆ.