ಬೆಂಗಳೂರು, ಏ.15- ಬರುವ ಏ.26 ರಂದು ನಡೆಯಲಿರುವ ಮೊದಲ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.24ರ ಸಂಜೆ 6ಗಂಟೆಯಿಂದ 26ರ ಮಧ್ಯರಾತ್ರಿ 12ಗಂಟೆವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವುದನ್ನು ಮನಗಂಡು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಎ.ದಯಾನಂದ್ ಅವರು ಈ ಆದೇಶ ಹೊರಡಿಸಿದ್ದಾರೆ.
ಏಪ್ರಿಲ್ 24 ರ ಸಂಜೆ 6 ಗಂಟೆಯಿಂದ 26 ರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಅದೇ ರೀತಿ ಮತ ಏಣಿಕೆ ನಡೆಯಲಿರುವ ಜೂ 4 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಿಷೇಧಾಜ್ಞೆ ಸಂದರ್ಭಲ್ಲಿ ನಗರ ಜಿಲ್ಲಾ ವ್ಯಾಪ್ತಿಯಲ್ಲಿ 5 ಜನಕ್ಕಿಂತ ಹೆಚ್ಚು ಜನ ಸೇರುವುದು, ಸಭೆ, ಸಮಾರಂಭ ನಡೆಸಲು ಅನುಮತಿ ನಿರಾಕರಿಸಲಾಗಿದೆ. ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಜೆರಾಕ್ಸ್, ಸೈಬರ್ ಕೆಫೆ, ಬುಕ್ ಸ್ಟಾಲ್ ಗಳ ವ್ಯಾಪಾರಕ್ಕೆ ನಿರ್ಬಂಧ ಹಾಕಲಾಗಿದೆ.
ಮತಗಟ್ಟೆ 100 ಮೀ ಅಂತರದಲ್ಲಿ ಅನುಮತಿ ಪಡೆದ ಚುನಾವಣಾ ಸಿಬ್ಬಂದಿಗಳನ್ನ ಹೊರತುಪಡಿಸಿ ಇತರರಿಗೆ ಮೊಬೈಲ್, ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಮಾಡುವಂತಿಲ್ಲ. ಪ್ರಚಾರಕ್ಕೆ ಸಂಬಂಧಿಸಿದ ಪೊಸ್ಟರ್, ಬ್ಯಾನರ್ ಧ್ವನಿವರ್ಧಕ ಬಳಕೆಗೆ ನಿಷೇಧ ಹಾಕಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ದಯಾನಂದ್ ಎಚ್ಚರಿಸಿದ್ದಾರೆ.