Friday, May 3, 2024
Homeಬೆಂಗಳೂರುಕಾಮಗಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರ ಸಾವು, ಎಫ್ಐಆರ್ ದಾಖಲು

ಕಾಮಗಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರ ಸಾವು, ಎಫ್ಐಆರ್ ದಾಖಲು

ಬೆಂಗಳೂರು, ಏ.15- ಬಿಡಬ್ಲ್ಯೂಎಸ್‌ಎಸ್‌ಬಿ ಕಾಮಗಾರಿಗಾಗಿ ತೋಡಿದ್ದ ಗುಂಡಿಗೆ ದ್ವಿಚಕ್ರವಾಹನ ಸವಾರ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೈಕ್ ಸವಾರ, ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಾಗಿದೆ. ಕೊಮ್ಮಘಟ್ಟ ಸರ್ಕಲ್ನಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಪೈಪ್ ಆಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಗುಂಡಿ ತೋಡಲಾಗಿದೆ. ಈ ಸ್ಥಳಕ್ಕೆ ಬ್ಯಾರಿಕೇಡ್ ಸಹ ಅಳವಡಿಸಿ ಸಂಚಾರಿ ಫಲಕ ಹಾಕಲಾಗಿದೆ.

ಕೋಮಘಟ್ಟದಲ್ಲೇ ಗುಜುರಿ ವ್ಯಾಪಾರ ಮಾಡುವ ಜೆಜೆ ನಗರದ ಸದ್ದಾಂಪಾಷ (20), ಉಮ್ರಾನ್ ಪಾಷಾ ಮತ್ತು ಮುಬಾಕರ್ ಪಾಷಾ ರಾತ್ರಿ 8.30ರ ಸುಮಾರಿನಲ್ಲಿ ವ್ಯಾಪಾರ ಮುಗಿಸಿಕೊಂಡು ಒಂದೇ ಬೈಕ್ನಲ್ಲಿ ಮನೆಗೆ ಬರುತ್ತಿದ್ದರು.

ಸದ್ದಾಂ ಪಾಷಾ ಅತಿವೇಗ ಹಾಗೂ ನಿರ್ಲಕ್ಷ್ಯತೆಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಸಮೇತ ಗುಂಡಿಗೆ ಬಿದ್ದ ಪರಿಣಾಮ ಸದ್ದಾಂಗೆ ಗಂಭೀರ ಪೆಟ್ಟಾಗಿ ಮೃತಪಟ್ಟಿದ್ದಾನೆ. ಹಿಂಬದಿ ಸವಾರರಿಬ್ಬರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಜಲಮಂಡಳಿ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿಲ್ಲ
ಕೆಂಗೇರಿ ಸಮೀಪ ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಮೃತಪಟ್ಟ ದ್ವಿಚಕ್ರ ವಾಹನ ಸವಾರನ ಕುಟುಂಬಕ್ಕೆ ಮಾನವೀಯ ದೃಷ್ಟಿಯಿಂದ ಪರಿಹಾರ ಕೊಡಿಸುವ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಮಂಡಳಿಯ ತಪ್ಪು ಇಲ್ಲ. ಆದರೂ ಮಾನವೀಯ ದೃಷ್ಟಿಯಿಂದ ಪರಿಹಾರ ಕೊಡಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆಕಸ್ಮಿಕವಾಗಿ ಆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಆದರೆ, ಈ ಪ್ರಕರಣದಲ್ಲಿ ಜಲಮಂಡಳಿ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಉದ್ದೇಶದಿಂದ ನಾವು 120 ಕಿ.ಮೀ ದೂರದಿಂದ ಕಾವೇರಿ ನೀರಿನ ಪೈಪ್ ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ ಇದಕ್ಕಾಗಿ ನಡೆಯುತ್ತಿರುವ ಕಾಮಗಾರಿ ಸಂದರ್ಭದಲ್ಲಿ ಸ್ಥಳದಲ್ಲಿ ಬ್ಯಾರಿಕೇಡ್ ಕೂಡ ಹಾಕಲಾಗಿತ್ತು. ಇಂತಹ ಜಾಗದಲ್ಲಿ ಒಂದೇ ಬೈಕ್ನಲ್ಲಿ ಮೂವರು ಸವಾರಿ ಮಾಡಿಕೊಂಡು ಬಂದು ಅಪಘಾತ ಮಾಡಿಕೊಂಡಿದ್ದಾರೆ ಬೈಕ್ನಲ್ಲಿ ಬಂದವರು ಹೆಲ್ಮೆಟ್ ಧರಿಸಿರಲಿಲ್ಲ ಹೀಗಾಗಿ ಅನಾಹುತವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಲಮಂಡಳಿ ವತಿಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ. ಮಾನವೀಯತೆಯ ದೃಷ್ಟಿಯಿಂದ ಮೃತಪಟ್ಟವರಿಗೆ ಪರಿಹಾರ ಕೊಡೋದರ ಬಗ್ಗೆ ಮೀಟಿಂಗ್ ಮಾಡ್ತೀವಿ ಎಂದು ಅವರು ತಿಳಿಸಿದರು.

RELATED ARTICLES

Latest News