ಹುಬ್ಬಳ್ಳಿ, ಫೆ.18: ಬಾಣಂತಿ, ಗರ್ಭಿಣಿಯರು, ಅಪೌಷ್ಟಿಕತೆ ಮತ್ತು ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮತ್ತು ಪೂರೈಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 26 ಜನರನ್ನು ಬಂಧಿಸಿ, ವಾಹನ ಸಮೇತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪ್ರಕರಣದಲ್ಲಿ ಧಾರವಾಡ ತಾಲೂಕ ನರೇಂದ್ರ ಗ್ರಾಮದ ಬೊಲೆರೋ ವಾಹನ ಮಾಲಕ ಮಂಜುನಾಥ ದೇಸಾಯಿ, ಚಾಲಕ ಲಕಮಾಪೂರದ ಬಸವರಾಜ ಭದ್ರ ಶೆಟ್ಟಿ, ಗೋದಾಮು ಮಾಲಕ ಹಳೇಹುಬ್ಬಳ್ಳಿ ನೇಕಾರನಗರದ ಮೊಡ್ಡದಗೌಡ ಖಲೀಪಾ, ಬಾಡಿಗೆದಾರ ಗೌತಮಸಿಂಗ ಠಾಕೂರ, ಹುಬ್ಬಳ್ಳಿ ತಾಲೂಕ ಕುರಡಿಕೇರಿಯ ಮಂಜುನಾಥ ಮಾದರ, ಕುಂದಗೋಳ ತಾಲೂಕ ಯರಗುಪ್ಪಿಯ ಫಕ್ಕಿರೇಶ ಹಲಗಿ, ಕೃಷ್ಣಾ ಮಾದರ, ರವಿ ಹರಿಜನ ಸೇರಿದಂತೆ 18 ಅಂಗನವಾಡಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತರಿಂದ ಅಂದಾಜು 4ಲಕ್ಷ ರೂ. ಮೌಲ್ಯದ ಒಟ್ಟು 329 ಚೀಲಗಳಲಿದ್ದ 8ಟನ್ 84ಕೆಜಿ ಆಹಾರ ಪದಾರ್ಥಗಳಾದ ಗೋಧಿ ರವಾ, ಮಿಲೇಟ್ ಲಡ್ಡು, ಪುಷ್ಟಿ, ಅಕ್ಕಿ, ಹಾಲಿನ ಪುಡಿ, ಸಾಂಬಾರ ಮಸಾಲಾ ಪುಡಿ, ಬೆಲ್ಲ, ಉಪ್ಪಿಟ್ಟು ಮಸಾಲಾ, ಸಕ್ಕರೆ, ಕಡಲೆಬೇಳೆ ಜಫ್ತು ಮಾಡಲಾಗಿದೆ ಎಂದು ತಿಳಿಸಿದರು.
ಖಚಿತ ಮಾಹಿತಿ ಮೇರೆಗೆ ರವಿವಾರ ಹಳೆ ಗಬ್ಬರ ಹೊರ ವಲಯದಲ್ಲಿರುವ ಗೋದಾಮು ಮೇಲೆ ದಾಳಿ ಮಾಡಿದಾಗ, ಅಲ್ಲಿ ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ವಿತರಿಸುವ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಅವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕರಿ ಕಸಬಾಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನನ್ವಯ ಎಂಟು ಜನ ಸೇರಿದಂತೆ 18 ಅಂಗನವಾಡಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪ್ರಕರಣದ ಕೂಲಕುಂಷ ತನಿಖೆ ನಡೆಯುತ್ತಿದ್ದು, ಇದರಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ. ಕಾಳಸಂತೆಯಲ್ಲಿ ಇವನ್ನು ಹೇಗೆ ಮಾರಾಟ ಮಾಡುತ್ತಿದ್ದರು. ಇದರ ಜಾಲ ಇನ್ನೂ ಎಷ್ಟು ಹಬ್ಬಿದೆ ಎಂಬುದರ ಕುರಿತು ಆಳವಾಗಿ ತನಿಖೆಗೆ ಒಳಪಡಿಸುವಂತೆ ಸೂಚಿಸಿದ್ದೇನೆ. ಇದೊಂದು ಗಂಭೀರವಾದ ಸಂಘಟಿತವಾದ ಅಪರಾಧ ಪ್ರಕರಣವಾಗಿದ್ದು, ನಿಷ್ಪಕ್ಷಪಾತ ತನಿಖೆಗೊಳಪಡಿಸಲಾಗುವುದು ಎಂದು ತಿಳಿಸಿದರು.