Friday, November 22, 2024
Homeರಾಜ್ಯಜೈಲಲ್ಲಿ ರಾಜಾತೀಥ್ಯ ಪ್ರಕರಣ : 3 ಪ್ರಕರಣಗಳ ತನಿಖೆಗಾಗಿ 5 ವಿಶೇಷ ತಂಡ ರಚನೆ

ಜೈಲಲ್ಲಿ ರಾಜಾತೀಥ್ಯ ಪ್ರಕರಣ : 3 ಪ್ರಕರಣಗಳ ತನಿಖೆಗಾಗಿ 5 ವಿಶೇಷ ತಂಡ ರಚನೆ

3 FIRs filed against Darshan, 9 jail officials suspended

ಬೆಂಗಳೂರು, ಆ.27- ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟ ದರ್ಶನ್‌ ಹಾಗೂ ಕುಖ್ಯಾತ ರೌಡಿ ವಿಲ್ಸನ್‌ಗಾರ್ಡನ್‌ ನಾಗ ಮತ್ತು ಇತರರಿಗೆ ರಾಜಾತೀಥ್ಯ ನೀಡಿರುವ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಐದು ತಂಡಗಳು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರ ನೇತೃತ್ವದಲ್ಲಿ ಈಗಾಗಲೇ ತನಿಖೆ ಆರಂಭಿಸಿವೆ.ಒಂದನೇ ಪ್ರಕರಣದಲ್ಲಿ ದರ್ಶನ್‌, ನಾಗರಾಜ ಹಾಗೂ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಕುಳ್ಳ ಸೀನನ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಈ ಪ್ರಕರಣದ ತನಿಖೆಯನ್ನು ಬೇಗೂರು ಠಾಣೆ ಇನ್ಸ್ ಪೆಕ್ಟರ್‌ ನೇತೃತ್ವದಲ್ಲಿ ನಡೆಸುತ್ತಿದ್ದು, ಜೈಲಿನ ಲಾನ್‌ನಲ್ಲಿ ಕುಳಿತು ಸಿಗರೇಟ್‌ ಸೇವನೆ, ನಟ ದರ್ಶನ್‌ಗೆ ರೌಡಿಗಳ ಜೊತೆ ಸಂಪರ್ಕ ಹೇಗೆ ಆಯ್ತು, ಲಾನ್‌ನಲ್ಲಿ ಒಟ್ಟಿಗೆ ಕುಳಿತುಕೊಳ್ಳಲು ಇವರಿಗೆ ಚೇರ್‌, ಟೀಪಾಯಿ ವ್ಯವಸ್ಥೆ ಮಾಡಿದವರ್ಯಾರು, ಕಾಫಿ ತಂದು ಕೊಟ್ಟವರ್ಯಾರು, ಜೈಲಿನಲ್ಲಿ ಸಿಗರೇಟ್‌ ನಿಷೇಧವಿದ್ದರೂ ಒಳಗೆ ಹೇಗೆ ಬಂತು ಎಂಬಿತ್ಯಾದಿ ಬಗ್ಗೆ ಮಾಹಿತಿಗಳನ್ನು ತನಿಖಾ ತಂಡ ಕಲೆಹಾಕುತ್ತಿದೆ.

ಎರಡನೇ ಪ್ರಕರಣದಲ್ಲಿ ದರ್ಶನ್‌, ಧರ್ಮ ಮತ್ತು ಸತ್ಯನ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಹುಳಿಮಾವು ಠಾಣೆ ಇನ್ಸ್ ಪೆಕ್ಟರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮೊಬೈಲ್‌ ಫೋನ್‌ನಲ್ಲಿ ದರ್ಶನ್‌ ರೌಡಿಯ ಮಗನಿಗೆ ವಿಡಿಯೋ ಕಾಲ್‌ ಮಾಡಿರುವ ಬಗ್ಗೆ, ಅದು ವೈರಲ್‌ ಆಗಿರುವ ಫೋಟೋ ತೆಗೆದವರ್ಯಾರು, ಜೈಲಿನಲ್ಲಿ ಮೊಬೈಲ್‌ ನಿಷೇಧವಿದ್ದರೂ ಆರೋಪಿಗಳ ಕೈಗೆ ಮೊಬೈಲ್‌ ಸಿಕ್ಕಿದ್ದಾದರೂ ಹೇಗೆ, ಅದನ್ನು ಒದಗಿಸಿದವರ್ಯಾರು, ಜೈಲಿನ ಸುತ್ತ ಜಾಮರ್‌ ಅಳವಡಿಸಿದ್ದರೂ ಇಂಟರ್‌ನೆಟ್‌ ಕನೆಕ್ಷನ್‌ ಸಿಕ್ಕಿದ್ದಾದರೂ ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮೂರನೇ ಪ್ರಕರಣದಲ್ಲಿ ಜೈಲಿನ ನಾಲ್ಕು ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪದ ವಿರುದ್ಧ ಎಲೆಕ್ಟ್ರಾನಿಕ್‌ ಸಿಟಿ ಉಪವಿಭಾಗದ ಎಸಿಪಿ ಅವರು ತನಿಖೆ ನಡೆಸುತ್ತಿದ್ದಾರೆ.

ಉಳಿದ ಎರಡು ತಂಡಗಳಲ್ಲಿ ಒಂದು ತಂಡ ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಅವರನ್ನು ಯಾರ್ಯಾರು ಇದುವರೆಗೂ ಭೇಟಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಉಳಿದ ಆರೋಪಿಗಳನ್ನು ಯಾರು ಭೇಟಿ ಮಾಡಿದ್ದಾರೆಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.

ಐದನೇ ತಂಡ ಜೈಲಿನ ಒಳಗಡೆ ಹಾಗೂ ಹೊರಗಡೆ ಅಳವಡಿಸಿರುವ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದೆ. ಒಟ್ಟಾರೆ ಈ ಪ್ರಕರಣದಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳ ತನಿಖೆಗಾಗಿ ಐದು ತಂಡಗಳು ಕಾರ್ಯಾಚರಣೆಗಿಳಿದಿದ್ದು, ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಿ ವರದಿ ನೀಡಲಿವೆ.

ಜೈಲಿನೊಳಗೆ ಸಿಗರೇಟ್‌ ಇನ್ನಿತರ ವಸ್ತುಗಳನ್ನು ಸರಬರಾಜು ಮಾಡಿದವರ್ಯಾರು ಹಾಗೂ ವಿಲ್ಸನ್‌ಗಾರ್ಡನ್‌ ನಾಗನಿಗೆ ರಾಜಾತೀಥ್ಯ ವ್ಯವಸ್ಥೆ ಮಾಡಿಕೊಟ್ಟವರ್ಯಾರು ಎಂಬ ಬಗ್ಗೆಯೂ ಹೆಚ್ಚಿನ ಮಾಹಿತಿಗಳನ್ನು ತನಿಖಾ ತಂಡಗಳು ಸಂಗ್ರಹಿಸುತ್ತಿದ್ದು, ತನಿಖೆ ವೇಳೆ ಎಲ್ಲಿ ಕರ್ತವ್ಯ ಲೋಪವಾಗಿದೆ ಎಂಬುವುದು ಗೊತ್ತಾಗಲಿವೆ.

ನಟ ದರ್ಶನ್‌ ಜೈಲಿನೊಳಗೆ ಇನ್ನಿತರರೊಂದಿಗೆ ಒಟ್ಟಿಗೆ ಕುಳಿತು ಕಾಫಿ ಹಾಗೂ ಸಿಗರೇಟ್‌ ಹಿಡಿದುಕೊಂಡಿರುವ ಫೋಟೋ ವೈರಲ್‌ ಆಗುತ್ತಿದ್ದಂತೆ ಜೈಲಿನ ಒಂಭತ್ತು ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳ ತಲೆದಂಡವಾಗಿದ್ದು, ಉಳಿದ ಜೈಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಭಯ ಶುರುವಾಗಿದೆ.

RELATED ARTICLES

Latest News