ಬೆಂಗಳೂರು, ಮಾ.25- ಸಿಲಿಕಾನ್ ಸಿಟಿ ಎಂಬ ಮಾಯಾನಗರಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಕಾಣೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2021ರಲ್ಲಿ 4,205 ಮಂದಿ, 2022ರಲ್ಲಿ 4,854 ಮತ್ತು 2023ರಲ್ಲಿ 6,017 ಮಂದಿ ನಾಪತ್ತೆಯಾಗಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕಾಣೆಯಾಗಿರುವುದು ಆತಂಕಕಾರಿ. ಮೂರು ವರ್ಷಗಳಲ್ಲಿ ಒಟ್ಟು 15,076 ಮಂದಿ ಕಾಣೆಯಾಗಿದ್ದಾರೆ. ಇವರಲ್ಲಿ 8,338 ಮಂದಿ ಮಹಿಳೆಯರೇ ಇದ್ದಾರೆ.
ಕೌಟುಂಬಿಕ ಕಲಹ, ವೈಯಕ್ತಿಕ ತೊಂದರೆ, ಜೀವನದಲ್ಲಿ ಜಿಗುಪ್ಸೆ, ಆರ್ಥಿಕ ತೊಂದರೆ, ಸಾಲದ ಬಾಧೆ ಮುಂತಾದ ಕಾರಣಗಳಿಂದ ಕಾಣೆಯಾಗುತ್ತಿದ್ದಾರೆ. ಕುಟುಂಬದಲ್ಲಿ ಯಾರೇ ನಾಪತ್ತೆಯಾದರೂ ಸಹ ಇಡೀ ಕುಟುಂಬ ಆರ್ಥಿಕವಾಗಿ, ಸಾಮಾಜಿಕವಾಗಿ ಸಂಕಷ್ಟಕ್ಕೊಳಗಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಅನೇಕ ತೊಂದರೆಗಳು ಬಂದೊದಗುತ್ತಿವೆ.
ಮನೆಯಲ್ಲಿ ಯಾರೇ ಕಾಣೆಯಾದರೂ ಆ ಕುಟುಂಬದ ಸದಸ್ಯರು ಮೊದಲು ತಮ್ಮ ನೆಂಟರು, ಬಂಧು-ಬಳಗ, ಸ್ನೇಹಿತರ ಮನೆಗಳಲ್ಲಿ ವಿಚಾರಿಸಿ, ಹುಡುಕಾಡಿ ಅಂತಿಮವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಾರೆ.ಪೊಲೀಸರು ತಮ್ಮ ಕೆಲಸಗಳನ್ನು ಮುಗಿಸಿ ಹುಡುಕಾಟ ನಡೆಸುವ ವೇಳೆಗೆ ಕೆಲವರು ರೈಲಿಗೆ ತಲೆ ಕೊಟ್ಟು, ಇನ್ನೂ ಕೆಲವರು ಬಾವಿ, ಕೆರೆ, ನದಿಗೆ ಹಾರಿ ಅಥವಾ ಕಟ್ಟಡದ ಮೇಲಿನಿಂದಲೋ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮತ್ತೆ ಕೆಲವರು ಕೊಲೆಯಾಗಿರುತ್ತಾರೆ.
ಕಾಣೆಯಾದ ನಂತರ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುತ್ತಾರೆ. ರಾಜ್ಯ ಹಾಗೂ ಕೆಲ ಹೊರರಾಜ್ಯಗಳ ಬಸ್, ರೈಲು ನಿಲ್ದಾಣಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಅವರ ಫೋಟೋ ಸಹಿತ ಹೆಸರು, ವಿಳಾಸವಿರುವ ಕರಪತ್ರಗಳನ್ನು ಅಂಟಿಸಿ ಹುಡುಕಾಟ ನಡೆಸುತ್ತಾರೆ.
ಕಾಣೆಯಾದ ವ್ಯಕ್ತಿ ಎಲ್ಲಿಯೂ ಸಿಗದೆ ಇದ್ದಾಗ ಕೊನೆಗೆ ಪ್ರಕರಣದ ಫೈಲ್ ಕಟ್ಟಿ ಎತ್ತಿಟ್ಟು ಪೊಲೀಸರು ಕೈ ತೊಳೆದುಕೊಳ್ಳುತ್ತಾರೆ. ಆ ವೇಳೆಗಾಗಲೇ ಕಾಣೆಯಾದ ಬಹುತೇಕ ಮಂದಿ ಮನೆಗೆ ವಾಪಸ್ ಬಂದಿರುತ್ತಾರೆ. ಇತ್ತ ಕಾಣೆಯಾಗಿ ಬಾರದೆ ಇರುವ ಕುಟುಂಬದ ಸದಸ್ಯರು ಇಂದು ಅಥವಾ ನಾಳೆ ಬರ್ತಾರೆ ಎಂದು ಕಾಯುತ್ತಾ ಅದೇ ಕೊರಗಿನಲ್ಲೇ ಜೀವನ ನಡೆಸುತ್ತಿರುತ್ತಾರೆ.
ಪೊಲೀಸರು ಕಾಣೆಯಾದ ಪ್ರಕರಣದಲ್ಲಿ ಬಾಲಕ, ಬಾಲಕಿ, ಪುರುಷ ಮತ್ತು ಮಹಿಳೆ ಎಂದು ನಾಲ್ಕು ವಿಭಾಗ ಮಾಡಿದ್ದಾರೆ. ಇದರಲ್ಲಿ ಬಾಲಕರಿಗಿಂತ ಬಾಲಕಿಯರೇ, ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣೆಯಾಗಿರುತ್ತಾರೆ.2021ರಲ್ಲಿ 2395, 2022ರಲ್ಲಿ 2628 ಮತ್ತು 2023ರಲ್ಲಿ 3315 ಮಂದಿ ಮಹಿಳೆಯರು ಕಾಣೆಯಾಗಿದ್ದಾರೆ.
2021ರಲ್ಲಿ 185, 2022ರಲ್ಲಿ 174 ಮತ್ತು 2023ರಲ್ಲಿ 207 ಮಂದಿ ಬಾಲಕಿಯರು ನಾಪತ್ತೆಯಾಗಿದ್ದಾರೆ.ಇದರಲ್ಲಿ 2021ರಲ್ಲಿ 53, 2022ರಲ್ಲಿ 69 ಮತ್ತು 2023ರಲ್ಲಿ 208 ಮಂದಿ ಮಹಿಳೆಯರು ಮತ್ತು 2021ರಲ್ಲಿ 02, 2022ರಲ್ಲಿ 03 ಮತ್ತು 2023ರಲ್ಲಿ 12 ಮಂದಿ ಬಾಲಕಿಯರು ಮಾತ್ರ ನಾಪತ್ತೆಯಾಗಿದ್ದು, ಉಳಿದವರು ಪತ್ತೆಯಾಗಿದ್ದಾರೆ.ಪೊಲೀಸರ ಅಂಕಿ-ಅಂಶಗಳ ಪ್ರಕಾರ, ಮೂರು ವರ್ಷಗಳಲ್ಲಿ ಒಟ್ಟು 330 ಮಹಿಳೆಯರು ಹಾಗೂ 17 ಮಂದಿ ಬಾಲಕಿಯರು ಇನ್ನೂ ಪತ್ತೆಯಾಗಿಲ್ಲ. ಹಾಗಾದರೆ ಇವರು ಎಲ್ಲಿಗೆ ಹೋಗಿದ್ದಾರೆ, ಹೇಗಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಪತ್ತೆಯಾಗದೆ ಇರುವ ಈ ಮಹಿಳೆಯರು ಮತ್ತು ಬಾಲಕಿಯರು ಮಾನವ ಕಳ್ಳ ಸಾಗಾಣಿಕೆ ಮೂಲಕ ಹೊರ ದೇಶದಲ್ಲಿ ಇದ್ದಾರೆಯೋ, ಮೋಸ ಜಾಲದಿಂದ ವೇಶ್ಯಾವಾಟಿಕೆಗೆ ಸಿಲುಕಿ ಹೊರಗೆ ಬರಲಾಗದೆ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಯೇ. ಕಣ್ಣು ಕಿತ್ತು, ಕೈ-ಕಾಲು ಮುರಿದು ವಿಕಲಚೇತನರನ್ನಾಗಿ ಮಾಡಿ ಭಿಕ್ಷಾಟನೆಗೆ ದೂಡುವ ಜಾಲಕ್ಕೆ ಸಿಲುಕಿ ನರಳಾಡುತ್ತಿದ್ದಾರೆಯೇ ಅಥವಾ ದುಷ್ಟ ರಾಕ್ಷಸರ ಕೈಗೆ ಸಿಕ್ಕಿಬಿದ್ದು ಇಡೀ ಜೀವನವನ್ನೇ ಕತ್ತಲ ಕೋಣೆಯಲ್ಲೇ ಕಳೆಯುತ್ತಿದ್ದಾರೆಯೇ..?ಈ ಎಲ್ಲ ಪ್ರಶ್ನೆ ಗೆ ಬೆಂಗಳೂರು ನಗರ ಪೊಲೀಸರು ಉತ್ತರಿಸಬೇಕು.