Friday, May 17, 2024
Homeರಾಜ್ಯವಿಧಾನಸಭೆಯಲ್ಲಿ ಧರಣಿ ಮಧ್ಯೆಯೂ 5 ವಿಧೇಯಕಗಳ ಅಂಗೀಕಾರ

ವಿಧಾನಸಭೆಯಲ್ಲಿ ಧರಣಿ ಮಧ್ಯೆಯೂ 5 ವಿಧೇಯಕಗಳ ಅಂಗೀಕಾರ

ಬೆಳಗಾವಿ,ಡಿ.11- ವಸತಿ, ಅಲ್ಪಸಂಖ್ಯಾತ ಸಚಿವರು ತೆಲಂಗಾಣ ಚುನಾವಣಾ ಕಣದಲ್ಲಿ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ಶಾಸಕರು ಧರಣಿ ನಡೆಸುತ್ತಿದ್ದ ವೇಳೆಯಲ್ಲೇ 5 ವಿಧೇಯಕಗಳನ್ನು ಬಹುತೇಕ ಚರ್ಚೆ ಇಲ್ಲದೆ ಅಂಗೀಕರಿಸಲಾಯಿತು.ಇಂದು ಬೆಳಿಗ್ಗೆ ವಿಧಾನಸಭೆಯ ಪ್ರಶ್ನೋತ್ತರದ ವೇಳೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ರ ಉತ್ತರವನ್ನು ತಿರಸ್ಕರಿಸುವುದಾಗಿ ಹೇಳಿದ ಬಿಜೆಪಿ ಸದಸ್ಯರು ವಿವಾದಿತ ಹೇಳಿಕೆ ನೀಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟುಹಿಡಿದರು.

ಸರ್ಕಾರ ಬಿಜೆಪಿ ಶಾಸಕರ ಬೇಡಿಕೆಗೆ ಸೊಪ್ಪು ಹಾಕದಿದ್ದಾಗ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಅದರ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ಶಾಸನ ರಚನೆಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಜಿಎಸ್ಟಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.
ಆನ್ಲೈನ್ ಗೇಮ್ಗಳನ್ನು ಜಿಎಸ್ಟಿ ತೆರಿಗೆ ವ್ಯಾಪ್ತಿಗೊಳಪಡಿಸಲು ವಿಧೇಯಕ ರೂಪಿಸಲಾಗಿದೆ. ಅಂದ ಮಾತ್ರಕ್ಕೆ ಆನ್ಲೈನ್ ಗೇಮ್ಗಳನ್ನು ಕಾನೂನುಬದ್ಧಗೊಳಿಸಲಾಗಿದೆ ಎಂದರ್ಥವಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ಕಾಯ್ದೆಗನುಗುಣವಾಗಿ ರಾಜ್ಯಸರ್ಕಾರ ತಿದ್ದುಪಡಿಯನ್ನು ರೂಪಿಸಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ 2023 ನೇ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತಿದ್ದುಪಡಿ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕದಿಂದ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ಕೊರತೆ ನೀಗಲಿದೆ ಎಂದು ಹೇಳಿದರು.

ಸ್ಪೀಕರ್ ಸ್ಥಾನದ ಕುರಿತು ಹೇಳಿಕೆ, ಜಮೀರ್ ವಜಾಕ್ಕೆ ಪಟ್ಟು, ವಿಧಾನಸಭೆಯಲ್ಲಿ ವಾಕ್ಸಮರ

ಸಚಿವ ಕೃಷ್ಣಭೈರೇಗೌಡ, ತಮ್ಮ ಇಲಾಖೆಗೆ ಸೇರಿದ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕ ನೋಂದಣಿ ಸ್ಟಾಂಪ್ ಶುಲ್ಕವನ್ನು ಹೆಚ್ಚಿಸುವುದಲ್ಲ. ಬದಲಾಗಿ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಖರೀದಿಸುವ ಸ್ಟಾಂಪ್ಗಳ ದರವನ್ನು ಹೆಚ್ಚಿಸಲಾಗಿದೆ. 5, 10, 20 ರೂ.ಗಳಿದ್ದ ದರವನ್ನು ಕಾಲಕ್ಕನುಗುಣವಾಗಿ ಹೆಚ್ಚಿಸಲಾಗಿದೆ. ಈ ಮೊದಲು 1994 ಮತ್ತು 2002 ರಲ್ಲಿ ಮಾತ್ರ ಕೆಲ ಸ್ಟಾಂಪ್ಗಳ ಮೇಲೆ ದರ ಪರಿಷ್ಕರಣೆಯಾಗಿತ್ತು ಎಂದು ವಿವರಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಸಚಿವ ಕೃಷ್ಣಭೈರೇಗೌಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿದರು. ಮಲೆನಾಡು ಭಾಗದಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ವಿಸ್ತೀರ್ಣ ವಿಶಾಲವಾಗಿರುತ್ತದೆ. ಜನಸಂಖ್ಯೆ ಕಡಿಮೆಯಿರುತ್ತದೆ. ಮಲೆನಾಡಿನ ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ತಾಲೂಕುಗಳನ್ನು ಹೊರತುಪಡಿಸಿ ವಿವಿಧ ಮಲೆನಾಡು ಭಾಗದಲ್ಲಿ ಪ್ರತಿಕ್ಷೇತ್ರದ ಜನಸಂಖ್ಯೆಯನ್ನು 18 ರಿಂದ 25 ಸಾವಿರಕ್ಕೆ ಮರುನಿಗದಿ ಮಾಡಲು ಈ ಕಾಯ್ದೆ ಅವಕಾಶ ಕಲ್ಪಿಸಲಿದೆ.

ರಾಜ್ಯದ ಉಳಿದ ಭಾಗಗಳಲ್ಲಿ ಪ್ರತಿಕ್ಷೇತ್ರದ ಜನಸಂಖ್ಯೆ 35 ರಿಂದ 45 ಸಾವಿರದಷ್ಟಿದೆ ಎಂದು ವಿವರಿಸಿದರು.ಶಾಸಕರಾದ ಎ.ಎಸ್.ಪನ್ನಣ್ಣ, ಮಂತರ್ಗೌಡ ಸೇರಿದಂತೆ ಕೆಲವು ಆಡಳಿತ ಪಕ್ಷದ ಶಾಸಕರು ಮಾತ್ರ ಚರ್ಚೆಯಲ್ಲಿ ಭಾಗವಹಿಸಿದ್ದರು.ಈ ನಾಲ್ಕು ವಿಧೇಯಕಗಳು ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕಾರಗೊಂಡವು. ನಂತರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಸುಧಾಕರ್, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಮಂಡಿಸಿದರು.

ಈ ಹಂತದಲ್ಲಿ ಸಭಾಧ್ಯಕ್ಷರು, ಇದೇ ಪ್ರಮುಖ ವಿಚಾರ. ಕರಾವಳಿ ಭಾಗದ ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು. ಆದರೂ ಬಿಜೆಪಿಯ ವತಿಯಿಂದ ನಡೆಯುತ್ತಿದ್ದ ಧರಣಿ , ಸತ್ಯಾಗ್ರಹ, ಘೋಷಣೆಗಳ ಕೂಗಾಟ ಮುಂದುವರೆದಿತ್ತು. ಹೀಗಾಗಿ ಮತ್ತೊಮ್ಮೆ ಯಾವುದೇ ಚರ್ಚೆಯಿಲ್ಲದೆ ಒಟ್ಟು 5 ವಿಧೇಯಕಗಳು ಅಂಗೀಕಾರಗೊಂಡವು. ಸದನವನ್ನು ಈ ರೀತಿ ನಡೆಸುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಚರ್ಚೆಯಿಲ್ಲದೆ ವಿಧೇಯಕಗಳನ್ನು ಅಂಗೀಕರಿಸುವುದು ಇಷ್ಟವಿಲ್ಲ. ಆದರೆ ಅಂತಹ ಪರಿಸ್ಥಿತಿಯನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ವಿಷಾದಿಸಿದರು.

ವಿಧೇಯಕಗಳನ್ನು ಪರ್ಯಾಲೋಚನೆಪಡಿಸಿದ ವೇಳೆ ಹಲವಾರು ಬಾರಿ ಚರ್ಚೆಯಲ್ಲಿ ಭಾಗವಹಿಸುವಂತೆ ಶಾಸಕರಿಗೆ ಮನವಿ ಮಾಡಲಾಯಿತು. ಗದ್ದಲದ ವಾತಾವರಣದಿಂದಾಗಿ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆಯಿಂದಲೂ ಚರ್ಚೆಗೆ ಆಸಕ್ತಿ ಕಂಡುಬರಲಿಲ್ಲ. ವಿರೋಧಪಕ್ಷದ ನಾಯಕರು ಶುಕ್ರವಾರದ ಕಲಾಪದ ದಿನ ಸೋಮವಾರ ವಿಧೇಯಕಗಳ ಅಂಗೀಕಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿ ಏಕಾಏಕಿ ಧರಣಿ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದು ವಿಧಾನಸಭಾಧ್ಯಕ್ಷರು ಅಸಮಾಧಾನ ಹೊರಹಾಕಿದರು.

RELATED ARTICLES

Latest News