Saturday, September 21, 2024
Homeರಾಜ್ಯರಾಜ್ಯದಲ್ಲಿ ಮಳೆಯಿಂದ 61,700 ಹೆಕ್ಟೇರ್‌ ಬೆಳೆ ಹಾನಿ

ರಾಜ್ಯದಲ್ಲಿ ಮಳೆಯಿಂದ 61,700 ಹೆಕ್ಟೇರ್‌ ಬೆಳೆ ಹಾನಿ

ಚಿಕ್ಕಮಗಳೂರು, ಆ.6– ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 61,700 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿದರು. ಬಾಬಾಬುಡನ್‌ ಗಿರಿಯ ಕವಿಕಲ್‌ಗಂಡಿಯಲ್ಲಿ ಭಾರಿ ಮಳೆಯಿಂದ ರಸ್ತೆ ಕುಸಿತವಾಗಿರುವುದನ್ನು ವೀಕ್ಷಣೆ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಇದುವರೆವಿಗೂ ಉತ್ತರ ಕರ್ನಾಟಕ ಹಾಗೂ ರಾಜ್ಯದ ಅಲ್ಲಲ್ಲಿ ಬೆಳೆ ಹಾನಿಯಾಗಿರುವ ವರದಿ ಬಂದಿದ್ದು, ಮಲೆನಾಡು ಪ್ರದೇಶದಲ್ಲಿ ಬೆಳೆ ಹಾನಿ ಜೊತೆಗೆ ಗುಡ್ಡ ಕುಸಿತ ಉಂಟಾಗಿದೆ. ಹಾನಿಗೆ ಸಂಬಂಧಿಸಿದಂತೆ ತಕ್ಷಣ ಪರಿಹಾರ ನೀಡಲು ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನೂ ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದ್ದು, ಹಾನಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

2019 ನೇ ಹಾಗೂ 2022 ನೇ ಸಾಲಿನಲ್ಲಿ 12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಆ ಸಂದರ್ಭದಲ್ಲಿ 250 ಜನರ ಪ್ರಾಣ ಹಾನಿಯಾಗಿದೆ, ಈ ವರ್ಷ 58 ಜನ ಇಲ್ಲಿಯವರೆಗೂ ಪ್ರವಾಹದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ. ದೊಡ್ಡ ಪ್ರವಾಹ ಕಂಡು ಬಂದಿಲ್ಲ. ಕೆಲವು ಸೀಮಿತ ಪ್ರದೇಶಗಳಲ್ಲಿ ಹಾನಿಯಾಗಿದೆ ಎಂದರು.

ಅಧಿವೇಶನ ಮುಗಿದ ತಕ್ಷಣ ಮುಖ್ಯಮಂತ್ರಿಗಳು, ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ವೀಕ್ಷಿಸಿ ಜನರಿಗೆ ಆಗಿರುವ ಸಮಸ್ಯೆಗೆ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಲೆನಾಡು ಬಹುಕಾಲದಿಂದ ಹೆಚ್ಚು ಮಳೆ ಕಂಡಿರುವ ಪ್ರದೇಶವಾಗಿದೆ. ಸ್ವಾಭಾವಿಕವಾಗಿ ಮಳೆ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹವಾಮಾನ ಬದಲಾವಣೆಯಿಂದಾಗಿ ಜೂನ್‌ ತಿಂಗಳಿನಿಂದ ಜುಲೈ 10ರ ವರೆಗೆ ಮಳೆ ಕೊರತೆ ಕಾಣುತ್ತೇವೆ. ಜುಲೈ 10 ರ ನಂತರ ಎರಡು ತಿಂಗಳಿಗಾಗುವಷ್ಟು ಮಳೆ 20 ದಿನದಲ್ಲಿ ಸುರಿದಿದೆ.

ಹವಾಮಾನ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಪರಿಸರದ ವಿಷಯದಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಇಷ್ಟ ಬಂದ ಹಾಗೇ ಗುಡ್ಡ ಕಡಿದು ರಸ್ತೆ ನಿರ್ಮಾಣ ಮಾಡುವುದರಿಂದ ಗುಡ್ಡ ಕುಸಿತದಂತಹ ಅವಘಡಗಳನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.

ಗುಡ್ಡ ಕುಸಿತದಂತಹ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರದ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದಿಂದ ರಾಜ್ಯದಲ್ಲಿ ಗುಡ್ಡ ಕುಸಿತ ಸಾಧ್ಯತೆ ಹೆಚ್ಚು ಇರುವ ಕಡೆ ಈಗಾಗಲೇ ವೈಜ್ಞಾನಿಕ ಸರ್ವೆ ಮಾಡಿಸಿದ್ದು, ಅದರ ವರದಿ ಆಧಾರದ ಮೇಲೆ ಮಲೆನಾಡು ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ.

ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಯಾವ ಜನವಸತಿ ಪ್ರದೇಶಗಳಲ್ಲಿ ಗುಡ್ಡ ಕುಸಿತದಿಂದ ತೊಂದರೆಯಾಗುವುದನ್ನು ಗುರುತಿಸಿ ವರದಿ ಕೊಡಲು ತಿಳಿಸಿದ್ದು, ಇನ್ನು 10-15 ದಿನಗಳಲ್ಲಿ ವರದಿ ತರಿಸಿಕೊಂಡು ಈ ವರ್ಷ 100 ಕೋಟಿ, ಮುಂದಿನ ವರ್ಷ 200 ಕೋಟಿ ಸೇರಿದಂತೆ ಒಟ್ಟು 300 ಕೋಟಿ ಮೊತ್ತದ ಗುಡ್ಡ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿದ್ದು , ಈ ಅನುದಾನದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಹಾಗೂ ಅಕ್ಕಪಕ್ಕದ ಕರಾವಳಿ ಜಿಲ್ಲೆಗಳ ಗುಡ್ಡ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅತಿವೃಷ್ಟಿಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲು ತಿಳಿಸಲಾಗಿದೆ. ಗುಡ್ಡ ಕುಸಿತದಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಸಾಧ್ಯವಿಲ್ಲ. ಅವುಗಳ ಮರು ನಿರ್ಮಾಣವಾಗಬೇಕಾಗಿದೆ. ಇಂಥ ರಸ್ತೆಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಶಾಸಕ ಹೆಚ್‌.ಡಿ. ತಮಯ್ಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್‌. ಹರೀಶ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್‌.ಎಸ್‌‍. ಕೀರ್ತನಾ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

RELATED ARTICLES

Latest News