ಬೆಂಗಳೂರು,ಮೇ 18- ಡೆಲಿವರಿ ಆಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಔಷಧಿಗಳ ಮಾರಾಟ ಹೆಚ್ಚುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಮೆಡಿಕಲ್ ಶಾಪ್‌ಗಳ ಮಾಲೀಕರು ಬೃಹತ್ ಬಂದ್‌ಗೆ ಕರೆ ನೀಡಿದ್ದಾರೆ. ಮೇ 20ರಂದು ಕರ್ನಾಟಕದಾದ್ಯಂತ ಸುಮಾರು 26 ಸಾವಿರಕ್ಕೂ ಹೆಚ್ಚು ಫಾರ್ಮಸಿಗಳು ಸಂಪೂರ್ಣವಾಗಿ ಮುಚ್ಚಲಿದ್ದು, ಬೆಂಗಳೂರಿನಲ್ಲೇ ಸುಮಾರು 6,500ಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಕಾರ್ಯ ನಿರ್ವಹಣೆ ಸ್ಥಗಿತಗೊಳಿಸಲಿವೆ.
ಆನ್‌ಲೈನ್ ಔಷಧಿ ಮಾರಾಟದಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಮೆಡಿಕಲ್ ಶಾಪ್‌ಗಳಿಗೆ ಭಾರೀ ಆರ್ಥಿಕ ಹೊಡೆತ ಬೀಳುತ್ತಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಮಯದಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದ್ದ ಹಿನ್ನೆಲೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಆನ್‌ಲೈನ್ ಔಷಧಿ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೆ ಕೋವಿಡ್ ಪರಿಸ್ಥಿತಿ ಬಳಿಕ ಈ ವ್ಯವಸ್ಥೆ ಮುಂದುವರಿದಿದ್ದು, ಈಗ ದೊಡ್ಡ ಆಪ್ ಕಂಪನಿಗಳು ಭಾರಿ ರಿಯಾಯಿತಿ, ಕ್ಯಾಶ್‌ಬ್ಯಾಕ್ ಹಾಗೂ 10 ನಿಮಿಷ ಡೆಲಿವರಿ ಸೇವೆಗಳ ಮೂಲಕ ಸ್ಥಳೀಯ ಫಾರ್ಮಸಿಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ ಎನ್ನಲಾಗಿದೆ.
ಆನ್‌ಲೈನ್ ಕಂಪನಿಗಳ ಅನಿಯಂತ್ರಿತ ವ್ಯವಹಾರದಿಂದ ಸ್ಥಳೀಯ ಮೆಡಿಕಲ್ ಶಾಪ್‌ಗಳು ಸಂಕಷ್ಟದಲ್ಲಿವೆ. ಆದ್ದರಿಂದ ಮೇ 20ರಂದು ರಾಜ್ಯಾದ್ಯಂತ ಬಂದ್ ನಡೆಸಲು ತೀರ್ಮಾನಿಸಲಾಗಿದೆ.ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಆಸ್ಪತ್ರೆಗಳ ಬಳಿಯ ಕೆಲವು ಮೆಡಿಕಲ್ ಶಾಪ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.
ಉಳಿದ ಅಂಗಡಿಗಳು ದಿನಪೂರ್ತಿ ಬಂದ್ ಆಗಲಿವೆ. ಕರ್ನಾಟಕ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ಜೀವನ್ ಕುಶಾಲಪ್ಪ ಸ್ಪಷ್ಟಪಡಿಸಿದರು. ಫಾರ್ಮಸಿ ಮಾಲೀಕರ ಪ್ರಕಾರ, ಭಾರತದಲ್ಲಿ ಇರುವ ಇ-ಫಾರ್ಮಸಿ ನಿಯಮಾವಳಿಗಳ ಪ್ರಕಾರ ಲೈಸೆನ್‌್ಸಹೊಂದಿದ ಭೌತಿಕ ಅಂಗಡಿಗಳ ಮೂಲಕವೇ ಔಷಧಿ ಮಾರಾಟ ನಡೆಯಬೇಕು. ಆದರೆ ಅನೇಕ ಆನ್‌ಲೈನ್ ಆಪ್‌ಗಳು ನಿಯಮಗಳನ್ನು ಉಲ್ಲಂಘಿಸಿ ಔಷಧಿಗಳನ್ನು ಮನೆಬಾಗಿಲಿಗೆ ತಲುಪಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ನಗರದ ಜಯನಗರ, ಕತ್ರಿಗುಪ್ಪೆ ಸೇರಿದಂತೆ ಹಲವೆಡೆ ಫಾರ್ಮಸಿ ನಡೆಸುತ್ತಿರುವ ಮಾಲೀಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮೊದಲು ಆನ್‌ಲೈನ್ ಆಪ್‌ಗಳು ಸಣ್ಣ ದಿನಸಿ ಅಂಗಡಿಗಳ ವ್ಯಾಪಾರಕ್ಕೆ ಹೊಡೆತ ನೀಡಿದವು. ಈಗ ಮೆಡಿಕಲ್ ಶಾಪ್‌ಗಳತ್ತ ಮುಖ ಮಾಡಿವೆ. ಯುವಕರು ನೇರವಾಗಿ ಅಂಗಡಿಗಳಿಗೆ ಬರುವುದೇ ಕಡಿಮೆಯಾಗಿದೆ.
ಹಿರಿಯ ನಾಗರಿಕರು ಮಾತ್ರ ತಮ ನಿಯಮಿತ ಔಷಧಿಗಳಿಗಾಗಿ ನಮನ್ನು ಅವಲಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಔಷಧ ಮಾರಾಟಕ್ಕೆ ಆನ್‌ಲೈನ್ ವೇದಿಕೆಗಳಿಗೆ ನೀಡಿರುವ ಅವಕಾಶ ಹಿಂಪಡೆಯುವಂತೆ ಆಗ್ರಹಿಸಿ ಮೇ 20ರಂದು ದೇಶಾದ್ಯಂತ ಔಷಧ ಅಂಗಡಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಲಕ್ಷಾಂತರ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿದೆ.
ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಕರೆ ನೀಡಿರುವ ಬಂದ್‌ಗೆ ಬೆಂಗಳೂರಿನಲ್ಲೂ 26,000ಕ್ಕೂ ಹೆಚ್ಚು ಔಷಧ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಔಷಧಗಳನ್ನು ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿಸಿತ್ತು.
ಪ್ರಸ್ತುತ ಆನ್‌ಲೈನ್ ಔಷಧ ವೇದಿಕೆಗಳು ಅಗ್ಗದ ದರದಲ್ಲಿ ಮನೆಗೇ ಮೆಡಿಸಿನ್ ತಲುಪಿಸುತ್ತಿದ್ದು, ಮೆಡಿಕಲ್ ಶಾಪ್‌ಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಸರಕಾರ ಔಷಧಗಳ ಆನ್‌ಲೈನ್ ಮಾರಾಟ ಆದೇಶವನ್ನು ವಾಪಸ್ ಪಡೆಯಬೇಕು ಎಂಬುದು ಮೆಡಿಕಲ್ ಶಾಪ್ ವ್ಯಾಪಾರಿಗಳ ಬೇಡಿಕೆ. ಸಣ್ಣ ಪಟ್ಟಣಗಳು ಮತ್ತು ಅರೆನಗರ ಪ್ರದೇಶಗಳಲ್ಲಿ ಸ್ಥಳೀಯ ಮೆಡಿಕಲ್ ಅಂಗಡಿಗಳೇ ಮುಖ್ಯ ಔಷಧ ಮೂಲವಾಗಿರುವುದರಿಂದ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆಯಿದೆ.
ವಿರೋಧ ಏತಕ್ಕೆ ? :
ಆನ್‌ಲೈನ್ ಮೂಲಕ ಅವೈಜ್ಞಾನಿಕ ಹಾಗೂ ಅನಿಯಂತ್ರಿತವಾಗಿ ನಡೆಯುತ್ತಿರುವ ಔಷಧ ಮಾರಾಟವನ್ನು ವಿರೋಧಿಸಿ ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಸಂಸ್ಥೆ (ಎಐಒಸಿಡಿ) ಹಾಗೂ ಕರ್ನಾಟಕ ರಾಜ್ಯ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಶನ್ (ಕೆಸಿಡಿಎ) ಮೇ 20ರಂದು ಕರೆ ನೀಡಿರುವ ದೇಶವ್ಯಾಪಿ 24 ಗಂಟೆಗಳ ಔಷಧ ಅಂಗಡಿಗಳ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಶನ್ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
