ಬೆೆಂಗಳೂರು,ಏ.21- ಬಿಟ್‌ಕಾಯಿನ್ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮದ್ ನಲ್ಪಾಡ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ 21 ಗಂಟೆಗಳ ಕಾಲ ನಂತರ ಶೋಧ ಕಾರ್ಯ ಮುಗಿಸಿದ್ದಾರೆ.
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಹಣಕಾಸು ವರ್ಗಾವಣೆ ಪ್ರಕರಣದಡಿ ಸೋಮವಾರ ಬೆಳಗ್ಗೆ 6.30ಕ್ಕೆ ಆರಂಭವಾದ ದಾಳಿಯು ಸತತವಾಗಿ 21 ಗಂಟೆ ಕಾಲಗಳ ನಂತರ ಬೆಳಗಿನ ಜಾವ 3:30ಕ್ಕೆ ದಾಳಿ ಮುಗಿಸಿ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ.
ನಾಲ್ಕು ಕಾರುಗಳಲ್ಲಿ ಆಗಮಿಸಿದ್ದ 14 ಮಂದಿ ಇ.ಡಿ ಅಧಿಕಾರಿಗಳ ತಂಡವು ನಲ್ಪಾಡ್ ಮನೆಯಲ್ಲಿ ಸಂಪೂರ್ಣ ಶೋಧ ನಡೆಸಿ, ಮಹತ್ವದ ದಾಖಲೆಗಳು, ಡಿಜಿಟಲ್ ಡಾಕ್ಯುಮೆಂಟ್‌ಗಳು, ಹಾರ್ಡ್ ಡಿಸ್ಕ್‌ಗಳು ಹಾಗೂ ವಿದೇಶಿ ಬ್ಯಾಂಕ್ ವ್ಯವಹಾರದ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ದಾಳಿ ಮುಗಿದ ಬಳಿಕ ಅಧಿಕಾರಿಗಳು ನಲ್ಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸ್ಥಳದಿಂದ ನಿರ್ಗಮಿಸಿದ್ದಾರೆ. ಈ ಪ್ರಕರಣವು 2017ರ ಬಿಟ್‌ಕಾಯಿನ್ ಕಳ್ಳತನ ಹಾಗೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದ್ದು, ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಜೊತೆಗಿನ ಸಂಪರ್ಕಗಳನ್ನು ಇಡಿ ಪರಿಶೀಲಿಸಲು ಮುಂದಾಗಿದೆ.
ಬೆಂಗಳೂರಿನಲ್ಲಿ ಒಟ್ಟು 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಇಡಿ ದಾಳಿ ನಡೆದಿದ್ದು, ಇದು ಕ್ರಿಪ್ಟೊಕರೆನ್ಸಿ ಸಂಬಂಧಿತ ಹಣಕಾಸು ಲಾವಣೆ ಪ್ರಕರಣದ ಭಾಗವಾಗಿದೆ.ಸೋಮವಾರ ಬೆಳಿಗ್ಗೆ 6.30ರ ವೇಳೆಗೆ ಇ.ಡಿ ಬೆಂಗಳೂರು ವಲಯದ 100ಕ್ಕೂ ಹೆಚ್ಚು ಸಿಬ್ಬಂದಿ ಶಾಸಕ ಮತ್ತು ನಲ್ಪಾಡ್ ತಂದೆ ಎನ್.ಎ.ಹ್ಯಾರಿಸ್ ಅವರ ಶಾಂತಿನಗರದ ನಿವಾಸವೂ ಸೇರಿ ಒಟ್ಟು 17 ಕಡೆ ದಾಳಿ ನಡೆಸಿದ್ದರು. ಶ್ರೀಕಿ ಸಂಪರ್ಕದಲ್ಲಿದ್ದುಕೊಂಡು ಬಿಟ್ ಕಾಯಿನ್ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನುವ ಆರೋಪವಿದೆ.
ಬಿಟ್ ಕಾಯಿನ್ ಪ್ರಕರಣ ಸಂಬಂಧ ದಾಖಲೆಗಳನ್ನು ಹುಡುಕಿದ ಇಡಿ ನಲ್ಪಾಡ್ ವಿದೇಶಿ ವ್ಯವಹಾರ ಹಾಗೂ ಹೂಡಿಕೆ ಕುರಿತಾದ ದಾಖಲೆಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಬಿಟ್‌ಕಾಯಿನ್ ಪ್ರಕರಣ ಪತ್ತೆಯಾಗುವುದಕ್ಕೂ ಮೊದಲ ಆರು ವರ್ಷಗಳ ಅವಧಿಯಲ್ಲಿ ನಲ್ಪಾಡ್ ಮತ್ತು ಶ್ರೀಕಿ ಮಧ್ಯೆ ನಿರಂತರ ಹಣಕಾಸು ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ ಒಟ್ಟು 4.65 ಕೋಟಿ ಹಣ ವರ್ಗಾವಣೆ ಆಗಿದ್ದು, ಬಿಟ್‌ಕಾಯಿನ್ ವಹಿವಾಟಗೂ ಇದಕ್ಕೂ ಸಂಬಂಧವಿದೆಯೇ ಅಥವಾ ಇದು ಬೇರೆ ಅಕ್ರಮ ವಹಿವಾಟಾ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಹಣಕಾಸು ನಂಟಿನ ಶಂಕೆ
ಈ ಹಿಂದೆ ಸಿಸಿಬಿ ಮತ್ತು ಸಿಐಡಿ ನಡೆಸಿದ್ದ ತನಿಖೆಯ ವೇಳೆ ಶ್ರೀಕಿ ಮತ್ತು ನಲ್ಪಾಡ್ ನಡುವೆ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಿಟ್‌ಕಾಯಿನ್ ವರ್ಗಾವಣೆ ಮತ್ತು ಅದರಿಂದ ಬಂದ ಹಣವನ್ನು ಅಕ್ರಮವಾಗಿ ಬಳಕೆ ಮಾಡಿರುವ ಬಗ್ಗೆ ಇಡಿ ಅಧಿಕಾರಿಗಳು ಈಗ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ವೇಳೆ ಹ್ಯಾರಿಸ್ ಮತ್ತು ಅವರ ಪುತ್ರರು ಮನೆಯಲ್ಲೇ ಇದ್ದು, ಅಧಿಕಾರಿಗಳು ಬ್ಯಾಂಕ್ ವಹಿವಾಟು ಹಾಗೂ ಇತರ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಆರೋಪಗಳು
ವೆಬ್‌ಸೈಟ್ ಹ್ಯಾಕಿಂಗ್- ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು ಕಳವು ಮಾಡುವುದು.ಡೇಟಾ ಕಳವು- ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಮಹತ್ವದ ಡೇಟಾ ಮತ್ತು ಹಣವನ್ನು ದೋಚುವುದು.
ಅಕ್ರಮ ಮಾರಾಟ- ಕಳುವಾದ ಡಿಜಿಟಲ್ ಆಸ್ತಿಗಳನ್ನು ಕ್ರಿಪ್ಟೊ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಿ ಹಣವಾಗಿ ಪರಿವರ್ತಿಸುವುದು.ಹಣ ವರ್ಗಾವಣೆ- ಮಾರಾಟದಿಂದ ಬಂದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿ ಮೂಲವನ್ನು ಮುಚ್ಚಿಡುವುದು.
ಅಕ್ರಮ ಬಳಕೆ- ಕಳುವಾದ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಹಾಗೂ ಡ್ರಗ್‌್ಸ ಖರೀದಿಯಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿರುವುದು.
