Tuesday, April 21, 2026
Homeರಾಜ್ಯರಾಜ್ಯದಲ್ಲಿ ಈ ಬಾರಿ ಮುಂಗಾರು ಕೊರತೆ, ಬರದ ಭೀತಿ

ರಾಜ್ಯದಲ್ಲಿ ಈ ಬಾರಿ ಮುಂಗಾರು ಕೊರತೆ, ಬರದ ಭೀತಿ

monsoon deficient, drought is feared in the state

ಬೆಂಗಳೂರು,ಏ.21-ಒಂದೆಡೆ ಜೂನ್‌ವರೆಗೆ ಬಿಸಿಗಾಳಿಯ ಮುನ್ಸೂಚನೆ, ಅದರ ಜೊತೆಗೆ ಬೇಸಿಗೆ ಹಂಗಾಮಿನಲ್ಲಿ ಬಿತ್ತನೆ ಪ್ರಮಾಣವೂ ಕುಂಠಿತವಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಾಗಲಿದೆ. ಆ ಮೂಲಕ ರಾಜ್ಯದಲ್ಲಿ ಬರದ ಭೀತಿ ಕಾಡಲು ಆರಂಭವಾಗಿದೆ.

ರಾಜ್ಯದಲ್ಲಿ ಏಪ್ರಿಲ್‌ನಿಂದ ಜೂನ್‌ ಅವಧಿಗೆ ಬಿಸಿಗಾಳಿಯ ದಿನಗಳ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಂದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಗಾಳಿ ದಿನಗಳು ಕಂಡುಬರುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಗದಗ, ಕೊಪ್ಪಳ, ವಿಜಯನಗರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಜೂನ್‌ ವರೆಗೆ ಬಿಸಿಗಾಳಿ ಬೀಸುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.

ಉಳಿದಂತೆ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಬಿಸಿಗಾಳಿ ದಿನಗಳು ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನ ಅಲ್ಲಲ್ಲಿ ಹೆಚ್ಚಿನ ತಾಪಮಾನ ಮತ್ತು ಬಿಸಿಗಾಳಿ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೃಷಿ ಬಿತ್ತನೆಯಲ್ಲಿ ಕುಸಿತ: ಇತ್ತ ಮಳೆಯ ಕೊರತೆ ಮಧ್ಯೆ ಬಿಸಿಗಾಳಿಯ ಮಧ್ಯೆ ರಾಜ್ಯ ಮಾರ್ಚ್‌ ಅಂತ್ಯದ ವರೆಗೆ ಬೇಸಿಗೆ ಋತುವಿನಲ್ಲಿ ಬಿತ್ತನೆ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ವಾಡಿಕೆ ಬಿತ್ತನೆ ಸಾಧ್ಯವಾಗದೆ ಕುಸಿತ ಕಂಡು ಬಂದಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಬೇಸಿಗೆ ಋತುವಿನಲ್ಲಿ ರಾಜ್ಯದಲ್ಲಿ 6.40 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ನಿಗದಿಯಾಗಿತ್ತು. ಆದರೆ, ಮಾರ್ಚ್‌ ಅಂತ್ಯಕ್ಕೆ ಆಗಿರುವ ವಾಸ್ತವಿಕ ಬಿತ್ತನೆ 4.54 ಲಕ್ಷ ಹೆಕ್ಟೇರ್‌ ಮಾತ್ರ. ಶೇಕಡಾವಾರು ಬಿತ್ತನೆ ವ್ಯಾಪ್ತಿ 71ರಷ್ಟು ಮಾತ್ರ ಎಂದು ಕೃಷಿ ಇಲಾಖೆ ಅಂಕಿಅಂಶ ನೀಡಿದೆ.

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಕಂಡು ಬಂದ ಸರಾಸರಿ ವಾಡಿಕೆ ಬಿತ್ತನೆ ಪ್ರದೇಶ 4.72 ಲಕ್ಷ ಹೆಕ್ಟೇರ್‌. ಅಂದರೆ ಶೇಕಡಾವಾರು ವಾಡಿಕೆ ಬಿತ್ತನೆ ವ್ಯಾಪ್ತಿ 965 ಇರುತ್ತದೆ. ಕಳೆದ ವರ್ಷ 2025ರಲ್ಲಿ ಇದೇ ಅವಧಿಗೆ ಅಂದರೆ ಮಾ.31ರ ವೇಳೆಗೆ ಬಿತ್ತನೆ ವ್ಯಾಪ್ತಿ 5.74 ಲಕ್ಷ ಹೆಕ್ಟೇರ್‌ ಆಗಿತ್ತು. ಈ ಬಾರಿಯ ಗುರಿಗಿಂತ 1.86 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1.2 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂರ್ವ ಮುಂಗಾರಿನ ಮಳೆಯ ಪರಿಸ್ಥಿತಿ ಹೇಗಿದೆ?:
ಮಾರ್ಚ್‌ 1ರಿಂದ ಏಪ್ರಿಲ್‌ 15ರವರೆಗೆ 10 ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಕಲಬುರಗಿ, ಹಾವೇರಿ, ಗದಗ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ದಾವಣಗೆರೆ, ಉಡುಪಿಯಲ್ಲಿ ಅತ್ಯಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಡಿಕೆಯಂತೆ ವಿಜಯನಗರ, ತುಮಕೂರು, ಬಳ್ಳಾರಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ, ಹಾಸನ, ಕೋಲಾರ ಸೇರಿ 10 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ.

6 ಜಿಲ್ಲೆಗಳಾದ ಮಂಡ್ಯ (21ಶೇ.), ಚಾಮರಾಜನಗರ (21ಶೇ.), ಕೊಡಗು (33ಶೇ.), ರಾಯಚೂರು (34ಶೇ.), ಮೈಸೂರು (ಶೇ.46) ಮತ್ತು ಯಾದಗಿರಿಯಲ್ಲಿ (ಶೇ.48) ಮಳೆ ಕೊರತೆಯಾಗಿದೆ. ಇನ್ನು ಬಾಗಲಕೋಟೆ, ಬೀದರ್‌, ಚಿಕ್ಕಮಗಳೂರು, ಕೊಪ್ಪಳ, ಚಿಕ್ಕಬಳ್ಳಾಪುರ ಈ 5 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ: ಪ್ರಸ್ತುತ 14 ಪ್ರಮುಖ ಜಲಾಶಯಗಳಲ್ಲಿ 321.93 ಟಿಎಂಸಿ ನೀರು ಲಭ್ಯವಿದೆ. ಇದು ಒಟ್ಟು ಸಾಮರ್ಥ್ಯದ ಶೇ.36ರಷ್ಟು ಮಾತ್ರ ಇದೆ. ಕಳೆದ ವರ್ಷ ಏಪ್ರಿಲ್‌ ಎರಡನೇ ವಾರದ ಅವಧಿಗೆ 330.35 ಟಿಎಂಸಿ ನೀರು ಲಭ್ಯವಿತ್ತು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ ಮಳೆಗಾಲ ಆರಂಭ ವಿಳಂಬ ಸಾಧ್ಯತೆ ಇರುವುದರಿಂದ ಜೂನ್‌ ಕೊನೆಯ ವಾರದವರೆಗೆ ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ಲಭ್ಯವಿರುವ ನೀರಿಗೆ ಆದ್ಯತೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಜೂನ್‌ ಅಂತ್ಯದ ವರೆಗೆ ಬೇಸಿಗೆ ಬೆಳೆಗೆ ನೀರು ಒದಗಿಸುವುದಕ್ಕಿಂತ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.

RELATED ARTICLES

Latest News