ಬೆಂಗಳೂರು,ಏ.21- ರಾಜ್ಯ ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಸಾರಿಗೆ ನೌಕರರೊಂದಿಗೆ ಮಾತುಕತೆಗೆ ಮುಂದಾಗಬೇಕು. ಸಮಸ್ಯೆ ಬಗೆಹರಿಸಲಾಗದ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಳಿ ನಡೆಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಸತತ ವೈಫಲ್ಯಗಳಿಂದ ಜನರ ಬವಣೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ವಿದ್ಯುತ್ ಬೆಲೆ ಏರಿಕೆ ಬರೆ ಬೆನ್ನಲ್ಲೇ ಈಗ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಾಗದ ಈ ಕಾಂಗ್ರೆಸ್ ಸರ್ಕಾರದಿಂದಾಗಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ತೊಂದರೆಯುಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ 2024ರ ವೇತನ ಪರಿಷ್ಕರಣೆಯನ್ನು 2026ಕ್ಕೆ ಮುಂದೂಡುವುದೂ ಸೇರಿದಂತೆ ರಾಜ್ಯದ ಶ್ರಮಜೀವಿಗಳ ಬೇಡಿಕೆ ಇತ್ಯರ್ಥಗೊಳಿಸದೆ, ಮುಂದು ಹಾಕುತ್ತಲೇ ಬಂದಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಲೇ ಈ ಪರಿಸ್ಥಿತಿ ಸೃಷ್ಟಿಯಾಗಿದೆ.
ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಬಗ್ಗೆ ಪ್ರಚಾರದಲ್ಲಿ ನಿರತವಾಗಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ , ಆ ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಬಸ್ ವ್ಯವಸ್ಥೆಯನ್ನಾಗಲಿ, ಶಿಸ್ತಿನ ಸೇವೆಯನ್ನಾಗಲಿ ಖಚಿತಪಡಿಸಿಕೊಳ್ಳುವ ಉತ್ತರದಾಯಿತ್ವ ಇಲ್ಲದಂತಾಗಿರುವುದು ದುರಂತ! ೆಎಂದು ಕಿಡಿಕಾರಿದ್ದಾರೆ.
ಸಾರಿಗೆ ಸ್ತಬ್ಧಗೊಂಡರೆ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾಮಾನ್ಯ ಪ್ರಯಾಣಿಕರು ಅನುಭವಿಸುವ ಕಷ್ಟಕ್ಕೆ ನೇರ ಹೊಣೆ ಈ ೞನಿಷ್ಕಿಯ ಕಾಂಗ್ರೆಸ್ ಸರ್ಕಾರ! ಸಮಸ್ಯೆಗಳನ್ನು ಬಗೆಹರಿಸುವ ಬದಲು ಮುಂದೂಡುವುದನ್ನೇ ಸಾಧನೆ ಎಂದು ನಂಬಿರುವ ರಾಜ್ಯ ಸರ್ಕಾರಕ್ಕೆ ಜನರ ಹಿತಕ್ಕಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
