ಬೆಂಗಳೂರು,ಏ.21- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಗೊಳಿಸಿದೆ.
ನ್ಯಾ. ಇ.ಎಸ್. ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠವು, 2025-26ನೇ ಸಾಲಿಗೆ ಹಿಂದಿ ವಿಷಯದಲ್ಲಿ ಗ್ರೇಡ್ ಪದ್ಧತಿಯ ಬದಲು ಅಂಕಗಳನ್ನು ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಪರೀಕ್ಷೆ ಅಧಿಸೂಚನೆ ಹೊರಡಿಸಿದಾ ಗಲೇ ಮೌಲ್ಯಮಾಪನ ವಿಧಾನವನ್ನು ಸ್ಪಷ್ಟಪಡಿಸಬೇಕಾ ಗಿತ್ತು ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿದೆ.
ಸರ್ಕಾರದ ಪರವಾಗಿ ಅಡ್ವೋಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಗ್ರೇಡ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಆದರೆ ಅಧಿಸೂಚನೆಯಲ್ಲಿ ಗ್ರೇಡ್ ಪದ್ಧತಿ ಉಲ್ಲೇಖಿಸದೇ ನಂತರ ಜಾರಿಗೊಳಿಸುವುದು ಸೂಕ್ತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಇದೇ ವೇಳೆ ಎಲ್ಲರನ್ನು ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ ಎಂದು ನ್ಯಾಯಾಲಯ ಕಟುವಾಗಿ ಹೇಳಿದ್ದು ಗಮನಾರ್ಹವಾಗಿದೆ. ನಿಯಮ ರೂಪಿಸಿದ ನಂತರ ಸರ್ಕಾರ ಸೂಕ್ತ ತಿದ್ದುಪಡಿ ಮಾಡಬಹುದು, ಆದರೆ ಈಗಾಗಲೇ ನಡೆದ ಪರೀಕ್ಷೆಯ ಮೌಲ್ಯಮಾಪನ ವಿಧಾನವನ್ನು ಬದಲಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸಲ್ಲಿಸಲಾಗಿದ್ದ ಪಿಐಎಲ್ ಕೂಡ ವಜಾಗೊಂಡಿದೆ. ಹಿಂದಿ ವಿಷಯದಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದ ಹಿನ್ನೆಲೆ, ಸರ್ಕಾರ ಗ್ರೇಡ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿತ್ತು.
ಈಗ ನ್ಯಾಯಾಲಯದ ಆದೇಶದಂತೆ ಈ ಸಾಲಿಗೆ ಅಂಕ ಪದ್ಧತಿಯನ್ನು ಅನುಸರಿಸಬೇಕಿದ್ದು, ಮುಂದಿನ ವರ್ಷಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ರೂಪಿಸಲು ಸರ್ಕಾರ ಕರಡು ಸಿದ್ಧಪಡಿಸುತ್ತಿದೆ.
