ಕಿನ್ಶಾಸಾ, ಮೇ.18- ಆಫ್ರಿಕಾದ ಕಾಂಗೋ ಮತ್ತು ಉಗಾಂಡಾ ದೇಶಗಳಲ್ಲಿ ಎಬೋಲಾ ಮಾರಕ ರೋಗಕ್ಕೆ 88 ಜನ ಬಲಿಯಾಗಿದ್ದಾರೆ. 300ಕ್ಕೂ ಹೆಚ್ಚು ಮಂದಿಗೆ ಎಬೋಲಾ ಸೋಂಕು ಹಬ್ಬಿರುವ ಶಂಕೆ ವ್ಯಕ್ತವಾಗಿದೆ.ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ.
ಕಾಂಗೋದ ಪೂರ್ವ ಪ್ರಾಂತ್ಯವಾದ ಇಟುರಿ ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ. ಇಲ್ಲಿಗೆ ಸುಮಾರು 1,000 ಕಿ.ಮೀ ದೂರದಲ್ಲಿರುವ ಕಾಂಗೋ ರಾಜಧಾನಿ ಕಿನ್ಯಾಸಾದ ವ್ಯಕ್ತಿಯೊಬ್ಬ ಭೇಟಿ ನೀಡಿದ್ದ. ಈಗ ಆತನಿಗೆ ಎಬೋಲಾ ಹರಡಿರುವುದು ದೃಢಪಟ್ಟಿದೆ.
ಉತ್ತರ ಕಿವು ಪ್ರಾಂತ್ಯದಲ್ಲೂ ಸೋಂಕು ಪತ್ತೆಯಾಗಿದೆ. ಆದರೆ ಇದು ಕೋವಿಡ್ ರೀತಿಯ ಆತಂಕಕಾರಿ ಪರಿಸ್ಥಿತಿಯನ್ನು ಉಂಟುಮಾಡುವುದಿಲ್ಲ ಎಂದು ಡಬ್ಲ್ಯುಎಚ್‌ಒ ಎಕ್‌್ಸನಲ್ಲಿ ಮಾಹಿತಿ ನೀಡಿದೆ.
ಎಬೋಲಾ ಸೋಂಕು ಬುಂಡಿಬುಗ್ಯ ವೈರಸ್‌ನಿಂದ ಹರಡುತ್ತದೆ. ಪ್ರಾಣಿಗಳಲ್ಲಿ ಹರಡಿ ನಂತರ ಮನುಷ್ಯನಿಗೆ ಈ ಸೋಂಕು ಹಬ್ಬುತ್ತದೆ. ಈ ಸೋಂಕು ತಗುಲಿದ ವ್ಯಕ್ತಿಗೆ ತೀವ್ರವಾದ ಜ್ವರ, ತಲೆನೋವು ಮತ್ತು ಮೈಕೈ ನೋವು, ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕಿಗೆ ಲಸಿಕೆ ಲಭ್ಯವಿಲ್ಲ.
ಎಬೋಲಾ ಎಂದರೇನು?: 1976ರಲ್ಲಿ ಕಾಂಗೋದ ಎಬೋಲಾ ನದಿ ತೀರದ ಪ್ರದೇಶದಲ್ಲಿ ಪತ್ತೆಯಾದ ವೈರಾಣು. ಹೀಗಾಗಿ ಇದಕ್ಕೆ ಎಬೋಲಾ ಎಂಬ ಹೆಸರು ಬಂತು. ಪೀಟರ್ ಪೈಯೋಟ್ ಎಂಬವರು ಎಬೋಲಾ ವೈರಸನ್ನು ಪತ್ತೆ ಹಚ್ಚಿದ್ದರು. ಈವರೆಗಿನ ವೈರಾಣುಗಳ ಪೈಕಿ ಅತ್ಯಂತ ಅಪಾಯಕಾರಿಯಾಗಿರುವ ವೈರಸ್ ಇದಾಗಿದೆ.
1976ರಲ್ಲಿ ಈ ಮಹಾಮಾರಿ ಸೋಂಕು 400ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ಇದು ಕೋತಿ, ಗೊರಿಲ್ಲಾ, ಚಿಂಪಾಂಜಿ, ಬಾವಲಿಗಳ ಮೂಲಕ ಹರಡುವ ರೋಗ.ಎಬೋಲಾ ಲಕ್ಷಣಗಳೇನು?: ತಲೆನೋವು, ಗಂಟಲು ಕೆರೆತ, ಸ್ನಾಯುಗಳಲ್ಲಿ ನೋವು, ಜ್ವರ, ಹೊಟ್ಟೆನೋವು, ದೇಹದಲ್ಲಿ ಗುಳ್ಳೆಗಳು ಕಾಣಿಸುತ್ತದೆ. ಮುಂದಿನ ಹಂತದಲ್ಲಿ ದೇಹದ ಒಳಭಾಗ ಸೇರಿ ಕಿವಿ, ಮೂಗಿನ ಮೂಲಕ ರಕ್ತ ಸೋರಿಕೆಯಾಗುತ್ತದೆ. ಕಾಯಿಲೆ ಪೀಡಿತರ ನೇರಸಂಪರ್ಕದಿಂದ ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗಿಯ ರಕ್ತ, ಬೆವರು, ವಾಂತಿ, ಮೂತ್ರ, ವೀರ್ಯದ ಸಂಪರ್ಕದಿಂದ ಕಾಯಿಲೆ ಹರಡುತ್ತದೆ.
ಎಬೋಲಾ ಹರಡಿದ 10 ಜನರಲ್ಲಿ 9 ಜನರ ಸಾವು ಬಹುತೇಕ ಖಚಿತ ಎಂಬ ಕಾರಣಕ್ಕೆ ಎಬೋಲಾ ಅಪಾಯಕಾರಿ ವೈರಸ್ ಎಂದೇ ಕುಖ್ಯಾತಿ ಪಡೆದಿದೆ.ಈ ವೈರಸ್ ರೋಗಿಯ ಶರೀರ ಪ್ರವೇಶಿಸಿದ 2ರಿಂದ 21 ದಿನದ ಒಳಗಡೆ ರೋಗಲಕ್ಷಣಗಳು ಕಾಣಿಸುತ್ತವೆ. ಇದಾಗಿ 16 ದಿನದೊಳಗೆ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಒಂದು ಬಾರಿ ಈ ವೈರಸ್ ಪತ್ತೆಯಾದರೆ ರೋಗಿಯನ್ನು ಬೇರೆಯವರ ಸಂಪರ್ಕಕ್ಕೆ ಬಿಡದಿರುವುದೇ ಈ ವೈರಸ್ ಹರಡದಿರುವಂತೆ ಮಾಡುವ ಸುಲಭೋಪಾಯ.
ರೋಗಿ ಸತ್ತರೂ ಸಾಯಲ್ಲ ವೈರಾಣು!: ಎಬೋಲಾ ರೋಗದಿಂದ ಸಾವನ್ನಪ್ಪಿದ ವ್ಯಕ್ತಿಯ ದೇಹದಲ್ಲಿ ಎಬೋಲಾ ವೈರಸ್ ಸುಮಾರು 7 ದಿನಗಳ ಕಾಲ ಜೀವಂತವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ವರದಿಯೇ ಹೇಳಿದೆ. ಸತ್ತ ವ್ಯಕ್ತಿಯನ್ನು ಮುಟ್ಟುವುದರಿಂದಲೂ ಈ ರೋಗ ಹರಡುವ ಸಾಧ್ಯತೆಯಿದೆ. ಎಬೋಲಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಭಾರೀ ಅಪಾಯಕಾರಿ. ಮೃತದೇಹವನ್ನು ಸುಟ್ಟರೂ ಎಬೋಲಾ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ.
ಎಬೋಲಾ ಹರಡುವಿಕೆ ಹೇಗೆ?: ಐದು ಬೇರೆ ಬೇರೆ ವಿಧದ ವೈರಸ್‌ಗಳು ಈ ಕಾಯಿಲೆಯನ್ನು ಹರಡುತ್ತವೆ. ಈ ಎಲ್ಲಾ ವಿಧದ ವೈರಸ್‌ಗಳು ಮನುಷ್ಯರಲ್ಲಿಯೂ ಈ ಕಾಯಿಲೆಯನ್ನು ಹರಡಲು ಸಮರ್ಥವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಬಾಧಿತ ಪ್ರಾಣಿಯ ರಕ್ತ, ದೇಹದ ಸ್ರಾವಗಳು, ಅಂಗಾಂಗಗಳು ಅಥವಾ ದೇಹದ ಇತರ ದ್ರವಾಂಶಗಳ ಮೂಲಕ ಆರೋಗ್ಯವಂತ ವ್ಯಕ್ತಿಗೆ ಸೋಂಕು ಬಾಧಿಸಬಹುದು.
ಮನುಷ್ಯರಲ್ಲಿ ಹರಡುವಿಕೆ ಹೇಗೆ? ಬಾಧಿತ ವ್ಯಕ್ತಿಯ ರಕ್ತ, ದೇಹದ ಸ್ರಾವಗಳು, ಅಂಗಾಂಗಗಳು ಅಥವಾ ದೇಹದ ಇತರ ದ್ರವಾಂಶಗಳ ಸಂಪರ್ಕದ ಮೂಲಕ ಹರಡಬಹುದು. ಸೋಂಕು ಬಾಧಿತರ ದೇಹ ದ್ರವಾಂಶಗಳ ಸಂಪರ್ಕದಿಂದ ಆರೋಗ್ಯ ಕಾರ್ಯಕರ್ತರಿಗೆ ಈ ಕಾಯಿಲೆಯು ಹರಡಬಹುದು. ಸೋಂಕು ಬಾಧಿತ ಪ್ರಾಣಿಯ ಮಾಂಸದ ನಿರ್ವಹಣೆಯ ಮೂಲಕ ಕಾಯಿಲೆಯು ಹರಡಬಹುದು. ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಯ ದೇಹ ದ್ರವದ ಸಂಪರ್ಕದಿಂದ ಕಾಯಿಲೆಯು ಹರಡಬಹುದು.
