Sunday, April 28, 2024
Homeರಾಜ್ಯಸಿರಿಧಾನ್ಯ ಬೆಳೆಯಲು ಪ್ರತ್ಯೇಕ ಕೋಶ ರಚನೆ : ಸಿಎಂ

ಸಿರಿಧಾನ್ಯ ಬೆಳೆಯಲು ಪ್ರತ್ಯೇಕ ಕೋಶ ರಚನೆ : ಸಿಎಂ

ಬೆಂಗಳೂರು,ಜ.5- ವಿದೇಶಗಳಿಗೆ ರಫ್ತು ಮಾಡುವ ಗುಣಮಟ್ಟದ ರಾಗಿ ಸೇರಿದಂತೆ ಇತರ ಸಿರಿಧಾನ್ಯಗಳನ್ನ ಬೆಳೆಯಲು ಪ್ರತ್ಯೇಕವಾದ ಕೋಶ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2024 ಮತ್ತು ಸಿರಿಧಾನ್ಯ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 8 ಲಕ್ಷ ಹೆಕ್ಟೇರ್‍ನಲ್ಲಿ ರಾಗಿ, 5 ಲಕ್ಷ ಹೆಕ್ಟೇರ್‍ನಲ್ಲಿ ಜೋಳ, 1.31 ಲಕ್ಷ ಹೆಕ್ಟೇರ್‍ನಲ್ಲಿ ಸಜ್ಜೆ ಬೆಳೆಯಲಾಗುತ್ತಿದೆ. 20 ಲಕ್ಷ ಟನ್ ಸಿರಿಧಾನ್ಯಗಳು ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ ಎಂದರು.

ವಿದೇಶಗಳಿಗೆ ರಫ್ತು ಮಾಡುವ ಗುಣಮಟ್ಟದ ರಾಗಿ ಲಭ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತ್ಯೇಕ ಕೋಶ ರಚನೆ ಮಾಡಿ ರಫ್ತು ಗುಣಮಟ್ಟದ ಸಿರಿಧಾನ್ಯ ಬೆಳೆಯಲು ಮುಂದಿನ ವರ್ಷದಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಪಡಿತರ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟಿನ್‍ನಲ್ಲಿ ಸಿರಿಧಾನ್ಯದ ಬಳಕೆಗೆ ಪ್ರೋತ್ಸಾಹ ನೀಡಲಾಗುವುದು. ಇದಕ್ಕಾಗಿ ಆಹಾರ, ಶಿಕ್ಷಣ, ನಗರಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ವಿಶೇಷ ಸಭೆ ನಡೆಸು ವುದಾಗಿ ಹೇಳಿದರು.

ಸಿರಿಧಾನ್ಯಗಳ ಇಳುವರಿ ಕಡಿಮೆ ಎಂಬ ಆಕ್ಷೇಪಣೆಯಿದೆ. ಹೊಸ ತಳಿ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಕ್ರಮ ಕೈಗೊಳ್ಳಬೇಕು. ಬರಗಾಲದ ಸಂದರ್ಭದಲ್ಲಿ ಸಿರಿಧಾನ್ಯಗಳ ಬೆಳೆ ಲಾಭದಾಯಕವಾಗಲಿವೆ. ವಿಶ್ವವಿದ್ಯಾಲಯಗಳಲ್ಲಿನ ಪ್ರಯೋಗಗಳು ಕೃಷಿ ಭೂಮಿಗೆ ತಲುಪಬೇಕು. ಕೃಷಿ ಭೂಮಿಯ ಸಮಸ್ಯೆಗಳು ಪ್ರಯೋಗಾಲಯದಲ್ಲಿ ಸಮೀಕ್ಷೆಗೊಳಗಾಗಬೇಕು. ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಅದಕ್ಕನುಗುಣವಾಗಿ ಕಡಿಮೆ ಮಳೆ ಹಾಗೂ ಭೂಮಿಯಲ್ಲಿ ಬಹು ಮಾದರಿಯ ಕೃಷಿ ಪ್ರಯೋಗಗಳಾಗಬೇಕು. ವಿಶ್ವವಿದ್ಯಾಲಯಗಳು ಸಂಶೋಧನೆಗೆ ಒತ್ತು ನೀಡಬೇಕು ಎಂದರು.

ಉತ್ತರ ಪ್ರದೇಶ : ವಾಂಟೆಡ್ ಕ್ರಿಮಿನಲ್ ವಿನೋದ್ ಕುಮಾರ್ ಉಪಾಧ್ಯಾಯ ಎನ್‌ಕೌಂಟರ್‌

ಮನಷ್ಯ ಕೃಷಿ ಆರಂಭಿಸಿದ ದಿನ ದಿಂದಲೂ ಸಿರಿಧಾನ್ಯ ಬೆಳೆಯುತ್ತಿದ್ದಾನೆ. ಕಡಿಮೆ ಮಳೆ ಯಾಗುವ ಪ್ರದೇಶಗಳಲ್ಲಿ ಸಿರಿಧಾನ್ಯ ವರದಾನದ ಬೆಳೆಯಾಗಿದೆ ಎಂದು ತಿಳಿಸಿದರು. ಸಿರಿಧಾನ್ಯದ ಬಳಕೆ ದೇಶಿಯವಾಗಿಯೂ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ರಫ್ತುಗೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಮತ್ತು ಸಾವಯವ ಕೃಷಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಜನಸಂಖ್ಯೆ ಹೆಚ್ಚಿರುವ ಭಾರತದಲ್ಲಿ ಆಹಾರದ ಸ್ವಾವಲಂಬನೆಗಾಗಿ ಹಾಗೂ ಆಗಿನ ಪ್ರಧಾನಿ ಇಂದಿರಾಗಾಂಧಿ, ದಿ.ಮಾಜಿ ಕೃಷಿ ಸಚಿವ ಬಾಬು ಜಗಜೀವನರಾಂ ಹಸಿರು ಕ್ರಾಂತಿಗೆ ಮುನ್ನುಡಿ ಬರೆದರು.

ವಿಶ್ವದಲ್ಲಿ ಚೀನಾವನ್ನು ಹಿಂದಿಟ್ಟು ಜನಸಂಖ್ಯೆಯಲ್ಲಿ ನಾವು ನಂ.1 ಸ್ಥಾನಕ್ಕೇರಿದ್ದೇವೆ. ಎಲ್ಲರಿಗೂ ಆಹಾರ ಒದಗಿಸುವ ಸಲುವಾಗಿ ರಾಸಾಯನಿಕ ಬಳಸಿ ಹೆಚ್ಚು ಆಹಾರ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ರಾಸಾಯನಿಕ ಬಳಕೆ ಸುರಕ್ಷತೆಯಲ್ಲ ಎಂಬ ಕಾರಣಕ್ಕಾಗಿ ಮತ್ತೆ ಸಾವಯವ ಕೃಷಿಗೆ ಮೊರೆ ಹೋಗಲಾಗುತ್ತಿದೆ. ರಾಜ್ಯದಲ್ಲಿ 2004 ರಲ್ಲಿ ಮೊದಲ ಬಾರಿಗೆ ಸಾವಯವ ಕೃಷಿ ನೀತಿ ಜಾರಿಗೆ ತರಲಾಯಿತು. 2017 ರಲ್ಲಿ ಅದನ್ನು ಪರಿಷ್ಕರಣೆ ಮಾಡಿ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಸಿರಿಧಾನ್ಯಗಳಲ್ಲಿ ಸಾರಜನಕ, ಲವಣಾಂಶ, ವಿಟಮಿನ್ ಮತ್ತು ನಾರಿನಂಶಗಳು ಹೇರಳವಾಗಿವೆ. ರಾಸಾಯನಿಕ ಬಳಕೆಯಿಂದ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಹೃದ್ರೋಗದಂತಹ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತವೆ. ಸಿರಿಧಾನ್ಯಗಳು ಆರೋಗ್ಯಕರವಾಗಿವೆ. ಇವುಗಳ ಸುಸ್ಥಿರ ಕೃಷಿ ಹಾಗೂ ವಾಯುಗುಣ ಯೋಗ್ಯ ತಳಿಗಳ ಅಭಿವೃದ್ಧಿ ಅಗತ್ಯ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಮಾತನಾಡಿ, ರಾಜ್ಯದಲ್ಲಿ 35 ಸಾವಿರ ಎಕರೆಯಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಪ್ಯಾಕೇಜಿಂಗ್ ಬ್ರಾಂಡಿಂಗ್‍ಗೆ 10 ಕೋಟಿ ರೂ. ಅನುದಾನ ನೀಡಲಾಗಿದೆ. 5 ಲಕ್ಷ ರೂ.ವರೆಗೂ ಬೆಳೆಗಾರರಿಗೆ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮೀಕ್ಷೆ ಮಾಡಿ ಸೆಪ್ಟೆಂಬರ್ 22 ರಂದು ದೇಶದಲ್ಲೇ ಮೊದಲ ಬಾರಿಗೆ ವರದಿ ನೀಡಿದ್ದು ಕರ್ನಾಟಕ ಸರ್ಕಾರ. ಕೇಂದ್ರ ಸರ್ಕಾರದ ಎಲ್ಲರಿಗೂ ಪತ್ರ ಬರೆದಿದ್ದೇವೆ, ಪರಿಹಾರದ ನಿರೀಕ್ಷೆಯಲ್ಲಿದ್ದೇವೆ ಎಂದರು.

ಇಂದಿನ ಕೃಷಿ ಮೇಳದಲ್ಲಿ 14 ರಾಜ್ಯಗಳು ಭಾಗವಹಿಸಿವೆ. ಸಿರಿಧಾನ್ಯ ಬೆಳೆಯ ಉತ್ಪಾದನೆ ಹೆಚ್ಚಾಗಬೇಕು. ಬಳಕೆ ಹೆಚ್ಚಾಗಬೇಕು. ರೈತರು ಸಮೃದ್ಧಿಯಾಗಬೇಕು. ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಪಡೆಯಬೇಕು ಎಂಬುದಾಗಿದೆ. ಅತೀ ಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ರಫ್ತಿನಲ್ಲಿ ಶೇ.9 ರಷ್ಟು ಪಾಲು ಹೊಂದಿದ್ದೇವೆ ಎಂದು ವಿವರಿಸಿದರು.

ಮೇಳದಲ್ಲಿ ಸಾರ್ವಜನಿಕರೇ ಸಿರಿಧಾನ್ಯ ಪದಾರ್ಥಗಳ ಅಡುಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯಶಸ್ವಿ ಮೇಳವನ್ನು ಆಯೋಜಿಸಲಾಗಿದೆ ಎಂದರು. ಉತ್ತರ ಪ್ರದೇಶ ಸರ್ಕಾರದ ಕೃಷಿ ಸಚಿವರಾದ ಸೂರ್ಯ ಪ್ರತಾಪ್ ಸಾಹಿ ಮಾತನಾಡಿ, ಜನವರಿ 22 ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮಮಂದಿರದಲ್ಲಿನ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ದೇಶದ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಆಹ್ವಾನ ನೀಡಿದರು.

15 ಮಂದಿ ಭಾರತೀಯರಿದ್ದ ಹಡಗು ಸೊಮಾಲಿಯಾ ಕರಾವಳಿಯಲ್ಲಿ ಅಪಹರಣ

ಕರ್ನಾಟಕ ಸರ್ಕಾರ ನಡೆಸಿರುವ ಬೆಳೆ ಸಮೀಕ್ಷೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಿರಿಧಾನ್ಯಗಳ ಬೆಳೆ ಹಾಗೂ ಬಳಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಸಾವಯವ ಕೃಷಿ ಬೆಳೆಗಾರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲï, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರುಗಳಾದ ವಿನಯ್ ಕುಲಕರ್ಣಿ, ಸುಧಾಮ ದಾಸ್, ರಾಜೂಗೌಡ, ವಿನಯ್ ಕುಲಕರ್ಣಿ, ದಿನೇಶ್ ಗೂಳಿಗೌಡ, ಕೋನರೆಡ್ಡಿ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News